ಮಗು ಜೀವಂತವಾಗಿ ಉಳಿಯುತ್ತದೆ ಎಂಬ ಭರವಸೆಯೂ ಇರದ ನವಜಾತ ಶಿಶುವಿಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಿರಂತರ 53 ದಿನಗಳ ಚಿಕಿತ್ಸೆ ನೀಡಿ, ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಪುನರ್ಜನ್ಮ ನೀಡಿದ್ದಾರೆ.
ಜನಿಸಿದಾಗಲೇ 700 ಗ್ರಾಂ ತೂಕ ಹೊಂದಿದ್ದ ನವಜಾತ ಶಿಶು, ಬದುಕಿ ಉಳಿಯುವ ಸಾಧ್ಯತೆ ಇರಲಿಲ್ಲ. ಆದರೂ ಛಲ ಬಿಡದ ಜಿಲ್ಲಾ ಆಸ್ಪತ್ರೆಯ ವೈದ್ಯರು ಪವಾಡವೆಂಬಂತೆ ಅತಿ ಕಡಿಮೆ ತೂಕದೊಂದಿಗೆ ಜನನವಾಗಿದ್ದ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಲೂಕಿನ ಆಲಗೂರ ಗ್ರಾಮದ ನಿವಾಸಿ ಆಯಿಶಾ ಎಂಬುವವರು 7ನೇ ತಿಂಗಳು ಗರ್ಭಿಣಿ ಇದ್ದಾಗಲೇ ಹೆರಿಗೆಯಾಗಿ ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಅದರಲ್ಲಿ ಒಂದು ಮಗು ಒಂದೂವರೆ ಕಿಲೋ ಇದ್ದರೆ, ಇನ್ನೊಂದು ಮಗು ಮಾತ್ರ ಕೇವಲ 750 ಗ್ರಾಂ ತೂಕ ಹೊಂದಿತ್ತು. ಜೊತೆಗೆ ಉಸಿರಾಟದ ಸಮಸ್ಯೆ ಹಾಗೂ ಇನ್ಫೆಕ್ಷನ್ನಿಂದ ಕೂಡಿತ್ತು. ಬಳಿಕ ಮತ್ತೆ ತೂಕ ಕಳೆದುಕೊಂಡ ಮಗು 700 ಗ್ರಾಂ ತೂಕಕ್ಕೆ ಬಂದಿದ್ದರಿಂದ ಮಗು ಉಳಿಯುವುದಿಲ್ಲವೆಂದು ವೈದ್ಯರು ತಿಳಿಸಿದ್ದರು.
ಹೇಗಾದರೂ ಮಾಡಿ ನಮ್ಮ ಮಗುವನ್ನು ಉಳಿಸಿ ಎಂದು ಆಯಿಶಾ-ಖಾದರಸಾಬ್ ದಂಪತಿಗಳು ವೈದ್ಯರನ್ನು ಕೇಳಿಕೊಂಡಿದ್ದರು. ಒಂದು ಪ್ರಯತ್ನ ಮಾಡಿ ನೊಡೋಣವೆಂದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಆಗದೆ ಹುಟ್ಟಿದ್ದ ಮಗುವಿಗೆ ನವಜಾತ ಶಿಶು ಆರೈಕೆ ಘಟಕದಲ್ಲಿರಿಸಿ ಏನೇನು ಚಿಕಿತ್ಸೆ ಮಾಡಬೇಕೋ ಅದನ್ನೆಲ್ಲ ಮಾಡಿ ಬರೋಬ್ಬರಿ 53 ದಿನಗಳ ಕಾಲ ಆರೈಕೆ ಮಾಡಿ ಕೊನೆಗೆ ಮಗುವನ್ನು ಉಳಿಸುವಲ್ಲಿ ಸಫಲರಾಗಿದ್ದಾರೆ.
ನವಜಾತ ಶಿಶು ಉಳಿಯುವ ಲಕ್ಷಣ ಇಲ್ಲದಿದ್ದರೂ ಕೂಡ ಇದನ್ನೇ ಸವಾಲಾಗಿ ಸ್ವೀಕರಿಸಿದ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹಾಗೂ ಅವರ ತಂಡ ಅವಿರತವಾಗಿ ಶ್ರಮಿಸಿ ಮಗುವಿಗೆ ಬೇಕಾದ ಎಲ್ಲ ಚಿಕಿತ್ಸೆಗಳನ್ನು ನೀಡಿದ್ದರಿಂದ ಮಗುವಿನ ತೂಕ ಇದೀಗ 1650 ಕಿಲೋಗ್ರಾಂಗೆ ಹೆಚ್ಚಾಗಿದೆ. ಹಾಗಾಗಿ ಶಿಶುವನ್ನು ನವಜಾತ ಶಿಶು ಆರೈಕೆ ಘಟಕದಿಂದ ಹೊರತಂದು ತಾಯಿಯ ಮಡಿಲಿಗೆ ಹಾಕಿದ್ದಾರೆ.
ಇನ್ನು ಶಿಶುವಿಗೆ ಇದೇ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡಿದ್ದರೆ ಕಡಿಮೆ ಎಂದರೂ 3 ಲಕ್ಷ ರೂಪಾಯಿ ಖರ್ಚು ಆಗುತ್ತಿತ್ತು. ಆದರೆ, ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ಉಚಿತವಾಗಿ ಆಗಿದ್ದು, ಒಂದೇ ಒಂದು ರೂಪಾಯಿ ಖರ್ಚಿಲ್ಲದೆ ಮಗುವನ್ನು ಬದುಕಿಸಿಕೊಂಡ ಅದೆಷ್ಟೋ ಬಡವರಿಗೆ ಅತ್ಯಂತ ಸಹಕಾರಿಯಾಗಿದೆ. ತಮ್ಮ ಮಗುವಿಗೆ ಚಿಕಿತ್ಸೆ ನೀಡಿ ಉಳಿಸಿದ್ದಕ್ಕೆ ಮಗುವಿನ ಪೋಷಕರು ಜಿಲ್ಲಾಸ್ಪತ್ರೆಯ ವೈದ್ಯರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಲಿಂಡರ್ ಸ್ಫೋಟ; ತಾಯಿ ಮಕ್ಕಳಿಗೆ ಗಂಭೀರ ಗಾಯ
ಕಳೆದ 2018 ರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಎಸ್ಎನ್ಸಿಯೂ ಸ್ಥಾಪನೆಯಾಗಿದ್ದು, ನವಜಾತ ಶಿಶುಗಳ ಚಿಕಿತ್ಸೆ ನೀಡಿ ಶಿಶುಗಳನ್ನು ಬದುಕಿಸುವಲ್ಲಿ ಇಲ್ಲಿನ ವೈದ್ಯರ ತಂಡ ಸಫಲವಾಗಿದೆ. ಸದ್ಯ 750 ಗ್ರಾಂ ತೂಕವಿದ್ದ ಮಗವಿಗೆ 53 ದಿನಗಳ ಕಾಲ ನಿರಂತರ ಚಿಕಿತ್ಸೆ ನೀಡಿ ಆ ಮಗುವನ್ನು ಬದುಕಿಸಿದ್ದು ಸಹ ಸಾಧನೆಯೇ ಆಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಉಚಿತವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ವೈದ್ಯರು ಮನವಿ ಮಾಡಿಕೊಂಡಿದ್ದಾರೆ.