ಶರಣೆ ನೀಲಾಂಬಿಕೆಯ ಐಕ್ಯ ಸ್ಥಳ, ಬಸವಣ್ಣನವರ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ಅವರ ಗುರುಪೀಠ ಇರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಿಗಿ ಗ್ರಾಮದಲ್ಲಿ ಜನರ ಅನುಕೂಲಕ್ಕೆಂದೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಂತೆ ಮಾರುಕಟ್ಟೆಯೊಂದು ಬಳಕೆ ಮಾಡಿಕೊಳ್ಳದ ಕಾರಣ ಪಾಳು ಬಿದ್ದಿದೆ.
ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಬಾರ್ಡ್ ಯೋಜನೆಯಡಿ 2024 -2025ನೇ ಸಾಲಿನಲ್ಲಿ ಅಂದಾಜು ರೂ 11 ಲಕ್ಷ ಅನುದಾನದಲ್ಲಿ ಈ ಸಂತೆ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಆದರೆ ಅದರ ಬಳಕೆ ಈವರೆಗೂ ಆಗಿಲ್ಲ. ಕಟ್ಟಿರುವ ಶೆಡ್, ಕಟ್ಟೆಗಳು ಕೆಲವೆಡೆ ಬಿದ್ದಿದ್ದರೆ ಇನ್ನೂ ಕೆಲವೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಸಂತೆ ಮಾರುಕಟ್ಟೆಗೆಂದು ಕಟ್ಟಿರುವ ಜಾಗದಲ್ಲಿ ಹಸು ಮೇಯಿಸಲು, ಹೊಟ್ಟು, ಕಟ್ಟಿಗೆ ಹಾಗೂ ಇತರ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ಸ್ವತಃ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ಇಲ್ಲೊಂದು ಸಂತೆ ಮಾರುಕಟ್ಟೆಯನ್ನು ಕಟ್ಟಿದ್ದೇವೆ ಎಂಬ ನೆನಪು ಇರಲಿಕ್ಕಿಲ್ಲ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಈಗಿನ ಶಾಸಕ ಸಿ ಎಸ್ ನಾಡಗೌಡ ಅವರ ಅವಧಿಯಲ್ಲಿ ಕುಂಟೋಜಿ ಚೆನ್ನವೀರ ಆಚಾರ್ಯರು, ತಾಳಿಕೋಟಿ ಎಪಿಎಂಸಿ ಅಧ್ಯಕ್ಷರಾಗಿದ್ದ ಎಂಜಿ ಪಾಟೀಲ ಗುಂಡಕನಾಳ ಅವರ ನೇತೃತ್ವದಲ್ಲಿ ಸಂತೆ ಮಾರುಕಟ್ಟೆಯನ್ನು ಉದ್ವಾಟಸಲಾಗಿತ್ತು. ಇದೀಗ ಆ ಉದ್ಘಾಟನೆಯ ನೆನಪಿಗೆ ಅಳವಡಿಸಿದ್ದ ನಾಮಫಲಕಗಳನ್ನು ಕಿಡಿಗೇಡಿಗಳು ಹೊಡೆದಿದ್ದಾರೆ ಎನ್ನಲಾಗಿದೆ.

ಅಲ್ಲಲ್ಲಿ ಹಾಳಾಗಿರುವ ಸಂತೆ ಮಾರುಕಟ್ಟೆಯನ್ನು ದುರಸ್ತಿ ಮಾಡಿಸಿ ಬಳಕೆ ಮಾಡಲು ಮುಂದಾದರೆ ತಂಗಡಿಯಲ್ಲೊಂದು ಸುಸಜ್ಜಿತ ಮಾರುಕಟ್ಟೆ ಆರಂಭಗೊಳ್ಳಲಿದೆ. ಅಧಿಕಾರಿಗಳು, ಗ್ರಾಮ ಪಂಚಾಯತಿ ಆಡಳಿತ ಕಾರ್ಯಾನ್ಮೋಮುಖವಾಗಬೇಕಿದೆ.
“20 ವರ್ಷಗಳಿಂದ ನಿರ್ಮಿಸಿರುವ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸ್ಥಳೀಯರು ಆಸಕ್ತಿ ತೋರಿದರೆ ಮಾರುಕಟ್ಟೆ ಸದುಪಯೋಗವಾಗಬಹುದು. ಆದರೆ ಸದ್ಯಕ್ಕೆ ಗ್ರಾಮ ಪಂಚಾಯತಿ ಆವರಣದಲ್ಲಿ ಪ್ರತಿ ಬುಧವಾರಕೊಮ್ಮೆ ವಾರದ ಸಂತೆ ಮಾಡಲಾಗುತ್ತಿದೆ. ಕಿರಿದಾದ ಜಾಗದಲ್ಲಿ ರಸ್ತೆಯ ಮೇಲೆ ವ್ಯಾಪಾರ ಮಾಡುವುದರಿಂದ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು ಎರಡು ಮೂರು ಸಾವುಗಳು ಸಂಭವಿಸಿವೆ” ಎಂಬುದು ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮುರೋಳ ಅವರ ಅಭಿಪ್ರಾಯ.

“ನಮ್ಮೂರ ಜನರ ಅನುಕೂಲಕ್ಕೆ ನಿರ್ಮಿಸಿರುವ ಸಂತೆ ಮಾರುಕಟ್ಟೆಯನ್ನು ಗ್ರಾಮಸ್ಥರು ಉಪಯೋಗ ಮಾಡಿಕೊಳ್ಳಬೇಕಿತ್ತು. ಆದರೆ 20 ವರ್ಷಗಳಿಂದ ಹಾಗೆಯೆ ಬಿಟ್ಟಿರುವುದು ದುರ್ದೈವದ ಸಂಗತಿ. ಎಪಿಎಂಸಿಯಿಂದ ಕಟ್ಟಿಸಿರುವ ಮಾರುಕಟ್ಟೆ ಉಪಯೋಗ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು” ಎಂದು ತಂಗಡಿಯ ಹಿರಿಯ ನಾಗರಿಕರ ಮನವಿ ಮಾಡಿದರು.
ಎಪಿಎಂಸಿ ಯಿಂದ ನಿರ್ಮಿಸಿರುವ ಸಂತೆ ಮಾರುಕಟ್ಟೆಯನ್ನು ದುರಸ್ತಿಗೊಳಿಸಲು 15ನೇ ಹಣಕಾಸು ಯೋಜನೆ ಅಡಿ ಕ್ರಿಯಾಯೋಜನೆ ಇರಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯತಿಯಿಂದ ಎರಡು ಬಾರಿ ಈ ಸಂತೆ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿ ಅಲ್ಲಿಗೆ ವಾರದ ಸಂತೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಊರಿಂದ ದೂರವಾಗುತ್ತದೆ ಎಂಬ ಕಾರಣ ಒಡ್ಡಿ ಕೆಲವರು ಅಲ್ಲಿಗೆ ಹೋಗುವುದಕ್ಕೆ ಹಿಂದೇಟು ಹಾಕಿದರು. ಮತ್ತೊಮ್ಮೆ ಈ ಬಗ್ಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ಚರ್ಚೆ ನಡೆಸಿ ಸಂತೆ ಮಾರುಕಟ್ಟೆಯಲ್ಲಿ ದುರಸ್ತಿ ಕಾರ್ಯ ಮಾಡಿಸಿ ಕಾರ್ಯಾರಂಭ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಪ್ರಭಾರ ಪಿಡಿಒ ಎಸ್.ಎಸ್. ಗಣಾಚಾರಿ ಈದಿನ ಪ್ರತಿನಿಧಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ವಿಜಯಪುರ | ಮಹಿಳಾ ದಿನಾಚರಣೆ; ಮಾರ್ಚ್ 6ರಂದು ಮಹಿಳಾ ಸಾಂಸ್ಕೃತಿಕ ಹಬ್ಬ-2025
ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಸಂತೆ ಮಾರುಕಟ್ಟೆಯ ದುರಸ್ತಿಗೆ ಮುಂದಾಗಬೇಕು. ಲಕ್ಷಾಂತರ ರೂ ವೆಚ್ಚದಲ್ಲಿ ಸಾರ್ವಜನಿಕರಿಗಾಗೇ ನಿರ್ಮಿಸಿರುವ ಮಾರುಕಟ್ಟೆ ದುರಸ್ತಿಯಾದರೆ ಸುತ್ತಲಿನ ಗ್ರಾಮಗಳಿಗೂ ಅನುಕೂಲವಾಗಲಿದೆ.