ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಮೃತರನ್ನು ಮನಗೂಳಿ ಪಟ್ಟಣದ ಖಂಡುಭಾ ಘೋರ್ಪಡೆ (55) ಹಾಗೂ ಭೀಮಪ್ಪ ಹಿಟ್ನಳ್ಳಿ (48) ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ಮನಗೂಳಿ ಕಡೆಯಿಂದ ಮುಳವಾಡ ಕಡೆಗೆ ಹೊರಟಿದ್ದರು. ಈ ವೇಳೆ ಮುಳವಾಡ ಕ್ರಾಸ್‌ನಲ್ಲಿ ಆಲಮಟ್ಟಿ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ಲಾರಿ ವೇಗವಾಗಿ ಬಂದು ಗುದ್ದಿದೆ. ಬೈಕ್ ಸವಾರರ ಸಾವಿಗೆ ಸರಕು ಸಾಗಣೆ ಲಾರಿ ಚಾಲಕನ ನಿರ್ಲಕ್ಷವೇ ಕಾರಣವೆಂದು ಮನಗೂಳಿ ಪಟ್ಟಣದ ಜನತೆ ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಜನ ಜಮಾಯಿಸಿ ರಸ್ತೆ ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾದ ಬೈಕ್ ಸವಾರರ ಕುಟುಂಬಕ್ಕೆ ಪರಿಹಾರ ನೀಡಬೇಕು. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ ವಿಜಯಪುರ | ಬೆಳೆವಿಮೆ ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ
ಮತ್ತೊಂದೆಡೆ, ಹೆದ್ದಾರಿ ಬಂದ್ ಆಗಿರುವುದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಮನಗೂಳಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಪ್ರತಿಭಟನಾ ನಿರತರ ಮನವೊಲಿಕೆ ಯತ್ನವನ್ನು ಪೊಲೀಸರು ಮಾಡಿದ್ದಾರೆ. ಈ ಬಗ್ಗೆ ಮನಗೂಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.