ಏಪ್ರಿಲ್ 11ರಂದು ʼಅಂಬೇಡ್ಕರ್ ಹಬ್ಬʼದ ಉದ್ಘಾಟನೆ ನಡೆಯಲಿದೆ. ಅಂದು ಫುಲೆ ದಂಪತಿಗಳು ಮತ್ತು ಫಾತಿಮಾ ಶೇಖ್ ಅವರ ಕುರಿತು ವಿಚಾರ ಸಂಕಿರಣ ಚರ್ಚೆ ನಡೆಯಲಿದೆ. ಸಂಜೆ ಹೋರಾಟದ ಹಾಡುಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ ಹೇಳಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ʼಅಂಬೇಡ್ಕರ್ ಹಬ್ಬʼದಂದು ಬಸವಣ್ಣ, ಜ್ಯೋತಿಬಾ- ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಹಾಗೂ ಬಾಬಾ ಸಾಹೇಬರ ಚಿಂತನೆಗಳ ಸಮಾಗಮವಾಗಲಿದೆ. ಶೋಷಿತರಿಗೆ ವಿಮೋಚನೆಯ ದಾರಿ ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ನೆನೆಯಲು ಮತ್ತು ಅವರ ವಿಚಾರಗಳನ್ನು ಚರ್ಚಿಸಲು ಮುಂದಾಗಿದ್ದು, ಮೊದಲ ಬಾರಿಗೆ ವಿಜಯಪುರ ನಗರದಲ್ಲಿ ನಾಲ್ಕು ದಿನಗಳ ಅಂಬೇಡ್ಕರ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಪ್ರಕಾಶಕರು ಪುಸ್ತಕ ಮಳಿಗೆ ಹಾಕಲಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ಮುಖಂಡರು, ಗಣ್ಯರವರೆಗೆ ಪ್ರತಿಯೊಬ್ಬರೂ ಭಾಗವಹಿಸಬೇಕಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಾರು ಹೋರಾಟಗಾರರು, ವಿಷಯ ತಜ್ಞರು, ರಾಜಕೀಯ ಧುರೀಣರು ಅಂಬೇಡ್ಕರ್ ಹಬ್ಬದ ಭಾಗವಾಗಲಿದ್ದಾರೆ. ಇಂತಹ ವಿಶಿಷ್ಟ ಕಾರ್ಯಕ್ರಮದಲ್ಲಿ ನಾಲ್ಕು ದಿನಗಳೂ ಎಲ್ಲರೂ ಭಾಗಿಯಾಗಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ʼಏತ ನೀರಾವರಿ ಪೂರ್ಣಗೊಳಿಸಿ ರೈತರ ಹಿತ ಕಾಪಾಡಿʼ
ಪತ್ರಿಕಾಗೋಷ್ಠಿಯಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ, ದಲಿತ ಸಂಘರ್ಷ ಸಮಿತಿ ನಾಗವಾರ ಬಣ ಜಿಲ್ಲಾ ಸಂಚಾಲಕ ಚೆನ್ನು ಕಟ್ಟಿಮನಿ, ಜಾಗೃತ ಕರ್ನಾಟಕದ ರಾಜ್ಯ ಮುಖಂಡ ಮಹಾಂತೇಶ್ ದೊಡ್ಡಮನಿ, ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ವಿಶ್ವೇಶ್ವರಿ ಮಠಪತಿ, ಸುನಿತಾ ಮೋರೆ, ಅಕ್ಷಯ್ ಕುಮಾರ್ ಅಜಮುನಿ ಇತರರು ಉಪಸ್ಥಿತರಿದ್ದರು.