ಭಾರತದ ಬಹುಸಂಖ್ಯಾತ ದಲಿತರು, ಶೋಷಿತರು, ವಿಶೇಷವಾಗಿ ಮಹಿಳೆಯರು ಇಂದು ಗೌರವಯುತವಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನ ಕಾರಣ ಎಂದು ಪ್ರಗತಿಪರ ಚಿಂತಕ, ಲೇಖಕ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ತೊರವಿ ರಸ್ತೆಯ ಡಾ. ಅಂಬೇಡ್ಕರ್ ಎಜುಕೇಶನಲ್ ಅಸೋಸಿಯೇಶನ್‌ನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ, ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಡಾ. ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾರ್ಥಿ ಜೀವನ ಸುಖಮಯವಾಗಿರಲಿಲ್ಲ. ಕಠಿಣ ಪರಿಶ್ರಮದಿಂದ ಜಗತ್ತಿನ ಅತ್ಯಂತ ವಿದ್ಯಾವಂತರಲ್ಲಿ ಒಬ್ಬರಾದರು. ಅವರ ಜನ್ಮದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಘೋಷಿಸಲಾಗಿದೆ. ಇಡೀ ಸಂವಿಧಾನ ರಚನಾ ಸಭೆಯಲ್ಲಿ ಅವರಷ್ಟು ಪದವಿಗಳು ಯಾರ ಬಳಿಯೂ ಇರಲಿಲ್ಲ. ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಅವರನ್ನು ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು” ಎಂದರು.

“ಸಾಮಾಜಿಕ ಸಮಾನತೆಗಾಗಿ ನಡೆದ ಎಲ್ಲ ಹೋರಾಟಗಳು ಬಸವಲಿಂಗಪ್ಪ ಅವರಿಂದ ಪ್ರಾರಂಭವಾದವು ಎಂದರೆ ತಪ್ಪಾಗದು. ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಅವರ ಒಂದು ಹೇಳಿಕೆ ಕಾರಣವಾಯಿತು. ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ಪ್ರಖರ ಬರಹಗಾರರು ಹುಟ್ಟಿಕೊಂಡರು ಎಂದು ಹೇಳಿದ ಅವರಿಗೆ ಬಿಜಾಪುರದಲ್ಲೂ ಅನೇಕ ಒಡನಾಡಿಗಳಿದ್ದರು. ಅಂಥವರಲ್ಲಿ ಒಬ್ಬರಾದ ತುಕಾರಾಮ ಚಂಚಲಕರ ಅವರು ಅಂಬೇಡ್ಕರ್ ಮತ್ತು ರಮಾ ತಾಯಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಧಾರವಾಡದ ಬಸವ ಮಿಷನ್‌ನ ಮಹಾದೇವ ಹೊರಟ್ಟಿ ಮಾತನಾಡಿ, “ಬಿ. ಬಸವಲಿಂಗಪ್ಪ ಅವರು ಒಬ್ಬ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ರಾಜಕಾರಣಿಯಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಅವರು ಕ್ಷಣವೂ ಇರುತ್ತಿರಲಿಲ್ಲ. ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಬಸವಲಿಂಗಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದರು. ಇಂದಿರಾ ಗಾಂಧಿಯಂಥವರನ್ನೇ ಧಿಕ್ಕರಿಸಿದವರು. ಅವರ ಜೀವನ ಮಾರ್ಗ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯ” ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತುಕಾರಾಮ ಚಂಚಲಕರ ಮಾತನಾಡಿ, “ಬಸವಲಿಂಗಪ್ಪ ಅವರ ಜೊತೆಗೂಡಿ ತಾವು ನಡೆಸಿದ ಸಾಮಾಜಿಕ ಹೋರಾಟಗಳ ಮೆಲುಕುಹಾಕಿದರು. ಮುಂದಿನ ದಿನಗಳಲ್ಲಿ ಬಿ. ಬಸವಲಿಂಗಪ್ಪ ಅವರ ಜನ್ಮದಿನವನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ರೈತರಿಂದ ಕಡಲೆಕಾಳು ಖರೀದಿಗೆ ಟಾಸ್ಕ್‌ಫೋರ್ಸ್ ಸಮಿತಿ ಸಭೆ ತೀರ್ಮಾನ
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಸಿದ್ದಪ್ಪ ಗುದಗೆನ್ನವರ, ಸಂಸ್ಥೆಯ ಅಧ್ಯಕ್ಷ ನಟರಾಜ ಚಂಚಲಕರ, ಉಪಾಧ್ಯಕ್ಷೆ ಸಿಂಧೂ ಚಂಚಲಕರ, ನಿವೃತ್ತ ಪ್ರಾಧ್ಯಾಪಕ ಎಸ್ ಆರ್ ಕಟ್ಟಿ, ಅಲ್-ಅಮೀನ ಮೆಡಿಕಲ್ ಕಾಲೇಜು ಟ್ರಸ್ಟಿ ಡಾ. ರಿಯಾಜ ಫಾರೂಖಿ, ಡಿ. ದೇವರಾಜ ಅರಸು ವಿಚಾರ ಜಾಗೃತಿ ಸಂಘದ ಅಧ್ಯಕ್ಷ ಅರವಿಂದ ಹಿರೊಳ್ಳಿ, ಸಮಾಜವಾದಿ ನಾಯಕ ಅಪ್ಪಾಸಾಹೇಬ ಯರನಾಳ, ಅಂಬೇಡ್ಕರವಾದಿ ಲೇಖಕ ಅನಿಲ ಹೊಸಮನಿ, ಸಿದ್ಧಾರ್ಥ ಹಾಸ್ಟೆಲ್ ಪಿಯು ಮತ್ತು ಪದವಿ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
