ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ಮನುಸ್ಮೃತಿ ಮತ್ತು ಆರೆಸ್ಸೆಸ್ ಕುರಿತು ಕಠಿಣವಾಗಿ ಟೀಕೆ ಮಾಡುತ್ತಿದ್ದರೆಂಬ ಸತ್ಯವನ್ನು ಈಗಿನ ಬಿಜೆಪಿ ನಾಯಕರು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಕಾಂಗ್ರೆಸ್ ಬಗ್ಗೆ ಟೀಕಿಸುತ್ತಿದ್ದರೆಂಬುದೂ ನಿಜ. ಆದರೆ, ಅಂಬೇಡ್ಕರ್ ವಿಷಯದಲ್ಲಿ ಕಾಂಗ್ರೆಸ್ ಯಾವತ್ತೂ ಅಪಮಾನ ಮಾಡಿಲ್ಲ. ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಂಬೇಡ್ಕರ್ ಕುರಿತು ಇತ್ತೀಚೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ. ಪಕ್ಷಾತೀತವಾಗಿ ಎಲ್ಲ ದಲಿತ ಸಂಸದರೂ ಅಮಿತ್ ಶಾ ರಾಜೀನಾಮೆಗೆ ಒತ್ತಾಯ ಮಾಡಬೇಕು. ಅಮಿತ್ ಶಾ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವುದು ಖಂಡನೀಯ. ಸಂಸದ ರಮೇಶ ಜಿಗಜಿಣಗಿ, ಅಮಿತ್ ಶಾ ಪರವಾಗಿ ನಿಂತಿರುವುದು ಸಲ್ಲದು” ಎಂದರು.
“ಇಷ್ಟೇ ಅಲ್ಲ, ಅಮಿತ್ ಶಾ ವಿಚಾರದಲ್ಲಿ ತಮ್ಮ ರಾಜೀನಾಮೆ ಬಗ್ಗೆ ಕೇಳಿದರೆ ರಮೇಶ ಜಿಗಜಿಣಗಿ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದು ಸರಿಯಲ್ಲ. ಇದು ಅವರ ದುರಹಂಕಾರವನ್ನು ತೋರಿಸುತ್ತದೆ” ಎಂದು ಟೀಕಿಸಿದರು.
“ಅಂಬೇಡ್ಕರ್ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಸುಳ್ಳುಗಳನ್ನು ಹೇಳಲಾಗುತ್ತಿದೆ. ಅಂಬೇಡ್ಕರ್ ಕುರಿತ ಘಟನಾವಳಿಗಳು ನಡೆದಾಗ ಜನಸಂಘದ ಮೂಲಕ ಆಗ ಬಿಜೆಪಿಯೂ ಅಸ್ತಿತ್ವ ಹೊಂದಿತ್ತು. ಅಂಬೇಡ್ಕರ್ ಅವರಿಗೆ ಜನಸಂಘದವರು ಯಾವತ್ತಾದರೂ ಬೆಂಬಲ ಕೊಟ್ಟಿದ್ದರಾ?, ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಯಾಕೆ ಗೆಲ್ಲಿಸುವ ಪ್ರಯತ್ನ ಮಾಡಲಿಲ್ಲ?. ಭಾರತ ರತ್ನ ವಿಚಾರದಲ್ಲೂ ಬಿಜೆಪಿ ಸುಳ್ಳು ಹರಡುತ್ತಿದೆ. ಆಗಿನ ಪ್ರಧಾನಿ ವಿ ಪಿ ಸಿಂಗ್ ನೇತೃತ್ವದಲ್ಲಿ ಸರ್ಕಾರದಲ್ಲಿ ಬಿಜೆಪಿ ಸರ್ಕಾರದ ಕೇವಲ ಒಂದು ಭಾಗವಾಗಿತ್ತು ಅಷ್ಟೇ. ಭಾರತ ರತ್ನಕ್ಕೆ ರಾಮ್‌ವಿಲಾಸ್ ಪಾಸ್ವಾನ್ ಒತ್ತಡ ಹೇರಿದ್ದರು. ಇದರಲ್ಲಿ ಬಿಜೆಪಿಯ ಯಾವ ಪಾತ್ರವಿರಲಿಲ್ಲ. ಅಲ್ಲದೇ, ಅಂಬೇಡ್ಕರ್ ಅವರ ಕುಟುಂಬದ ಇಚ್ಛೆಯಂತೆ ಮಹಾರಾಷ್ಟ್ರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತೇ ಹೊರತು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಭೀಮಾ ಕೋರೆಗಾಂವ್ ವಿಜಯೋತ್ಸವದಂತೆ ಬಾಡೂಟ ಚಳವಳಿ: ಬಿಟಿವಿ
ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, “ಅಂಬೇಡ್ಕರ್ ಅವರನ್ನು ಸಂವಿಧಾನದ ಕರಡು ಸಮಿತಿ ಅಧ್ಯಕರನ್ನಾಗಿ ಮಾಡಿದ್ದು ಕಾಂಗ್ರೆಸ್. ಅಲ್ಲದೆ, ಅವರ ಅಂತ್ಯಸಂಸ್ಕಾರದ ವೇಳೆ ಅಗತ್ಯವಾದ ಕ್ರಮಗಳನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಅಂಬೇಡ್ಕರ್ ತತ್ವಗಳಿಗೆ ವಿರುದ್ಧವಾಗಿ ಸಂಸದ ರಮೇಶ ಜಿಗಜಿಣಗಿ ನಡೆದುಕೊಳ್ಳುತ್ತಿದ್ದಾರೆ. ಇವತ್ತಿಗೂ ಸ್ವತಃ ಅವರೇ ಅಸ್ಪೃಶ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ. ವಿಜಯಪುರದ ಘನತೆಯನ್ನು ಜಿಗಜಿಣಗಿ ಅಸ್ಪೃಶ್ಯತೆ ಆಚರಣೆ ಮಾಡಿ ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಮುಶ್ರೀಫ್, ಮಾಹಿನ್ ಮುಖಂಡರಾದ ಸೋಮನಾಥ ಕಳ್ಳಿಮನಿ, ಎಂ ಸಿ ಮುಲ್ಲಾ, ನಾಗರಾಜ ಲಂಬು, ವಸಂತ ವನಮೋಡೆ,ಗಂಗಾಧರ ಸಂಬಣ್ಣ ಸೇರಿದಂತೆ ಇತರರು ಇದ್ದರು.