“ಹಿಂದೂ ಧರ್ಮದೊಳಗೆ ದಲಿತರಿಗೆ ಎಂದಿಗೂ ಏಳಿಗೆ ಇಲ್ಲ, ಅದಕ್ಕಾಗಿ ನಾನು ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರುವ ಮೂಲಕ ಮುಕ್ತನಾದೆ. ಎಲ್ಲರೂ ಬೌದ್ಧ ಧರ್ಮ ಪಾಲಿಸಬೇಕು ಎಂದು ಅಂಬೇಡ್ಕರ್ ಕರೆ ನೀಡಿದ್ದರು. ಅವರ ಆಶಯದಂತೆ ಅವರ ಅನುಯಾಯಿಗಳು ಬೌದ್ಧ ಧರ್ಮ ಪಾಲಿಸಬೇಕು” ಎಂದು ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ವಿಜಯಪುರ ನಗರದ ಅಂಬೇಡ್ಕರ್ ಭವನದಲ್ಲಿ ಮೇ ಸಾಹಿತ್ಯ ಮೇಳ ಬಳಗದಿಂದ ಹಮ್ಮಿಕೊಂಡಿದ್ದ ಅನಿಲ್ ಹೊಸಮನಿ ಎಂಬ ಸಂಘರ್ಷದ ಒಡನಾಡಿಯೊಂದಿಗೆ ಬಿಜಾಪುರದಲ್ಲಿ ಒಂದು ದಿನದ ಕಾರ್ಯಕ್ರಮದಲ್ಲಿ, ʼಅಂಬೇಡ್ಕರ್ ಸಹವಾಸದಲ್ಲಿʼ ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಅಂಬೇಡ್ಕರ್ ಅವರನ್ನು ಆರಾಧಿಸುವ ಬದಲಿಗೆ ಅವರ ವಿಚಾರ, ತತ್ವ ಸಿದ್ದಂತಗಳ ಪಾಲನೆ ಮುಖ್ಯ. ಅಂಬೇಡ್ಕರ್ ಎರಡು ಮದುವೆ ಆಗಿದ್ದರು. ಒಂದು ಬಡತನದೊಂದಿಗೆ, ಎರಡೆನೆಯದು ಅನಾರೋಗ್ಯದೊಂದಿಗೆ. ಹಸಿವು, ಬಡತನ, ಅನಾರೋಗ್ಯವನ್ನು ಅನುಭವಿಸುತ್ತಲೆ, ನೋವಿನ ನಡುವೆ ದೇಶಕ್ಕೆ ಉತ್ಕೃಷ್ಟವಾದ ಅಮೂಲ್ಯವಾದ ಸಂವಿಧಾನವನ್ನು ನೀಡಿದ್ದಾರೆ” ಎಂದರು.

“ಅಂಬೇಡ್ಕರ್ ಸಾವಿನ ಕುರಿತು ಕೇಳಿ ಬಂದ ಆರೋಪಗಳ ಕುರಿತು ಸರ್ಕಾರ ಕೂಡ ತನಿಖೆ ನಡೆಸಿ, ಸಂಸತ್ತಿನಲ್ಲಿ ವರದಿ ಮಂಡಿಸಿ, ಅಂಬೇಡ್ಕರ್ ಸಾವು ಅನಾರೋಗ್ಯದಿಂದ ಆಗಿದೆ ಎಂಬುದನ್ನು ಬಹಿರಂಗ ಮಾಡುತ್ತದೆ. ಅಂಬೇಡ್ಕರ್ ಅವರ ಎರಡನೇ ಪತ್ನಿ ಸವಿತಾ ಅವರ ಮೇಲೆ ಮಾಡಿದ್ದ ಆರೋಪಗಳೆಲ್ಲವೂ ಸುಳ್ಳು ಎಂದು ಸಾಬೀತಾಗುತ್ತದೆ” ಎಂದರು.
ಪ್ರೊ. ರಾಜು ಆಲಗೂರ ಮಾತನಾಡಿ, “ಪತ್ರಿಕೆ ಹೆಸರಲ್ಲಿ ಏನೇನೋ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ಪತ್ರಕರ್ತ ಅನಿಲ್ ಹೊಸಮನೆ ಪ್ರಾಮಾಣಿಕ ಜೀವನ ಸಾಗಿಸುತ್ತಿದ್ದಾರೆ. ನೈತಿಕ ಮೌಲ್ಯ ಉಳಿಸಿಕೊಂಡು, ಸಮಾಜದಲ್ಲಿ ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.
ಸಾಹಿತಿ ಸುನಂದಮ್ಮ ಮಾತನಾಡಿ, “ಮೇ ಸಾಹಿತ್ಯ ಬಳಗ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟು ಮಾಡುತ್ತಿದೆ. ಅದರ ಅಗತ್ಯ ನಾಡಿಗೆ ಇದೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ವಿದ್ಯಾರ್ಥಿನಿಯರ ವಸತಿ ನಿಲಯ ಮಂಜೂರಾತಿಗೆ ಆಗ್ರಹ
ಮುಂಬೈನ ವಿಜಯ ಸುರುವಡೆ ಅಭಿನಂದನಾ ಸಮಾರಂಭ ಉದ್ಘಾಟಿಸಿದರು. ಅನಿಲ್ ಹೊಸಮನಿ ಯವರ ಸಾಹಿತ್ಯ ವಿಜಯಪುರ ಜಿಲ್ಲೆಯ ದಲಿತ ಚಳವಳಿ ಮತ್ತು ಅನಿಲ್ ಹೊಸಮನಿ ಗೋಷ್ಠಿಗಳು ನಡೆದವು. ಅನಿಲ್ ಹೊಸಮನಿ ಅವರೊಂದಿಗೆ ಸಂವಾದ ನಡೆಯಿತು. ಹೊಸಮನೆ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಮಾವಳ್ಳಿ ಶಂಕರ್, ರಾಜಶೇಖರ ಯಡಹಳ್ಳಿ, ಶಾಮ್ ಘಾಟಿಗೆ, ಸುಜಾತ ಚಲವಾದಿ, ಅಭಿಷೇಕ ಚಕ್ರವರ್ತಿ, ಚನ್ನು ಕಟ್ಟಿಮನಿ, ಪ್ರಭುಗೌಡ ಪಾಟೀಲ, ದ್ರಾಕ್ಷಾಯಿಣಿ ಹುಡೆದ, ದ್ರಾಕ್ಷಾಯಿಣಿ ಬಿರಾದಾರ, ಭುವನೇಶ್ವರಿ ಕಾಂಬಳೆ, ಶ್ರೀನಾಥ ಪೂಜಾರಿ, ಬಸವರಾಜ ಜೋಗಾರ, ಸಿದ್ದರಾಮ ಉಪ್ಪಿನ, ಭಗವಾನ ರೆಡ್ಡಿ ಬಿ, ಮಲ್ಲಿಕಾರ್ಜುನ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಶಾರದಾ ಹೊಸಮನಿ, ನಾಗರಾಜ ಲಂಬು, ಮುತ್ತು ಬೆಳೆಯಲಿ, ಯಲ್ಲಪ್ಪ ಡೋಮನಾಳ, ಮಲ್ಲು ಜಾಲಗೇರಿ, ವಾಸುದೇವ ಕಾಳೆ, ಶಿವಮೊಗ್ಗ ಕಟ್ಟಿಮನಿ, ಸೋಮನಾಥ ಕಳ್ಳಿಮನಿ, ಬಸವರಾಜ ಚಲವಾದಿ ಹಾಗೂ ಜಿಲ್ಲೆಯ ದಲಿತಪರ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.