ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಾಯಂದಿರರ ಮತ್ತು ಮಕ್ಕಳ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ರೀತಿಯ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಆದರೆ, ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳು ಅಂಗನವಾಡಿ ಕಾರ್ಯಕರ್ತೆಯರ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನಿರ್ಮಾಣವಾದಂತೆ ಭಾಸವಾಗುತ್ತಿವೆ ಎಂದು ಕೆಆರ್‌ಎಸ್ ಪಕ್ಷದ ಮುಖಂಡರು ಆರೋಪಿಸಿದ್ದಾರೆ.
ವಿಯಪುರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಸಾವಿತ್ರಿ ಗುಗ್ಗರಿ ಅವರಿಗೆ ಪಕ್ಷದ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೇ ಇರುವುದಿಲ್ಲ. ಆದರೂ ಹಾಜರಾತಿ ಪೂರ್ತಿಯಾಗಿ ತೋರಿಸಿ, ಮಕ್ಕಳಿಗೆ ಬರುವ ಎಲ್ಲ ರೀತಿಯ ಸೌಲಭ್ಯಗಳನ್ನು (ಆಹಾರ ಕಿಟ್) ಹೊರಗಡೆ ಖಾಸಗಿ ವ್ಯಕ್ತಿಗಳಿಗೆ ಮಾರಿಕೊಳ್ಳುತ್ತಿರುವ ಬಗ್ಗೆ ಆರೋಪಗಳಿವೆ” ಎಂದು ಹೇಳಿದ್ದಾರೆ.
“ಅಂಗನವಾಡಿ ಕೇಂದ್ರಗಳು ಕೇವಲ ಸರ್ಕಾರಕ್ಕೆ ಸುಳ್ಳು ವರದಿ ನೀಡುವ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಈ ಕಹಿ ಸತ್ಯವು ಇಲಾಖೆಯ ಬಹುತೇಕ ಸಿಬ್ಬಂದಿಗಳಿಗೆ ತಿಳಿದಿದ್ದರೂ, ಯಾವುದೇ ಕ್ರಮ ಕೈಕೊಂಡಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಪಕ್ಷವು ಬೃಹತ್ ಹೋರಾಟ ನಡೆಸುತ್ತದೆ” ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಹಮಿದ ಇನಾಮದಾರ, ವಿಕ್ರಮ್ ವಾಘಮೋರೆ, ದುರ್ಗಪ್ಪ ಬೂದಿಹಾಳ, ಕಾಂತುಗೌಡ ಬೆಂಡವಾಡ, ಪ್ರವೀಣ ಕನಸೇ, ರಾಕೇಶ ಇಂಗಳಗಿ ರಾಘವೇಂದ್ರ ಛಲವಾದಿ. ಸುರೇಂದ್ರ ಕುನಸಲೇ, ಭೀಮಾಶಂಕರ ಕಾಂಬಳೆ, ಲಕ್ಷಣ ಚಡಚಣ ಮತ್ತಿತರರು ಇದ್ದರು.