ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ವಿಜಯಪುರದ ಹೊರವಲಯದಲ್ಲಿರುವ ಎನ್ಎಚ್ 50ರಲ್ಲಿ ಅಕ್ಕಿ ಕಳ್ಳಸಾಗಣೆ ಮಾಡುತ್ತಿದ್ದವರನ್ನು ಹಿಡಿದು, 40 ಟನ್ (40 ಸಾವಿರ ಕೆ.ಜಿ) ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಬಾಲಗಕೋಟೆ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಅನ್ನಭಾಗ್ಯ ಅಕ್ಕಿಯನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಹೆದ್ದಾರಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಮಿಳುನಾಡು ನೋಂದಾಯಿತ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 600ಕ್ಕೂ ಅಧಿಕ ಪ್ಲಾಸ್ಟಿಕ್ ಮೂಟೆ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಆಹಾರ ಮತ್ತು ನಾಗರೀಕ ಇಲಾಖೆಯ ಮ್ಯಾನೇಜರ್ ಅಮರೇಶ ತಾಂಡೂರ ಮತ್ತು ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಲಾರಿಯನ್ನು ನಿಲ್ಲಿಸಿ ಚಾಲಕ ಮತ್ತು ಸಹಾಯಕ ಪರಾರಿಯಾಗಿದ್ದಾರೆ. ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಶಿವಮೊಗ್ಗದ ಸಾಗರ ಭಾಗದಲ್ಲಿನ ಹಲವು ಗೋದಾಮುಗಳಿಂದ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿ, ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.