ವಿಜಯಪುರ ಜಿಲ್ಲೆಯ ತೋಟಗಾರಿಕಾ ಬೆಳೆಗಳ ತ್ವರಿತ ಸಾಗಣೆಗೆ ರೈಲುಸೇವೆ ಒದಗಿಸಬೇಕು ಎಂದು ಕೇಂದ್ರ ರೈಲ್ವೇ ಸಚಿವ ವಿ ಸೋಮಣ್ಣ ಅವರಿಗೆ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ರವಿ ಬೆಳ್ಳುಬ್ಬಿ ನೇತೃತ್ವದಲ್ಲಿ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಿಗೆ, ಜಿಲ್ಲೆಯ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ, ಬಾಳೆ ಹಾಗೂ ಇತರ ಬೆಳೆಗಳನ್ನು ದೆಹಲಿ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಸಾಗಣೆ ಮಾಡಲು ವಿಶೇಷ ರೈಲಿನ ವಿಸ್ತರಣೆ ಮಾಡುವುದು ಅಗತ್ಯವಿದೆ ಹಾಗೂ ನಗರದಿಂದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸಲು ವಂದೇ ಭಾರತ್ ರೈಲು ಸೇವೆ ಆರಂಭಿಸುವುದು ಕೂಡ ಸೂಕ್ತ. ಐತಿಹಾಸಿಕ ವಿಜಯಪುರ ನಗರದಿಂದ ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇ ಯೋಜನೆಗಳನ್ನು ತ್ವರಿತವಾಗಿ ಪೂರ್ತಿಗೊಳಿಸಬೇಕೆಂದು ಮನವರಿಕೆ ಮಾಡಿದರು.
ಈ ವೇಳೆ ಬಾಗಲಕೋಟೆ ಸಂಸದ ಪಿ ಸಿ. ಗದ್ದಿಗೌಡರ, ಶಾಸಕ ವಿರಣ್ಣ ಚರಂತಿಮಠ, ನಾರಾಯಣಸಾ ಬಾಂಡಗೆ, ಶಿವಾನಂದ ಅವಟಿ, ಸಚಿವರ ಆಪ್ತಕಾರ್ಯದರ್ಶಿ ಮಂಜುನಾಥ ವಂದಾಲ, ರಜನಿ ಸಂಬಣ್ಣಿ,ಮಧು ಪಾಟೀಲ ಸೇರಿದಂತೆ ಅನೇಕ ಜನ ಪ್ರತಿನಿಧಿಗಳು, ನಾಗರಿಕರು ಉಪಸ್ಥಿತರಿದ್ದರು.
