ಎರಡು ವರ್ಷದ ಹೋರಾಟಕ್ಕೆ ಫಲ ದೊರೆತಿದ್ದು, ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಪ್ರಸ್ತುತ ಆಡಳಿತ ಅಧಿಕಾರಿ ಡಾ. ಸುರೇಶ್ ಜಾಧವ ಅವರು ಕೆಲವೇ ತಿಂಗಳಲ್ಲಿ ಇಂಡಿ ತಾಲೂಕು ಆಸ್ಪತ್ರೆ ಅಧಿಕಾರಿಗಳೇ ನಾಚುವಂತೆ ಸಮುದಾಯ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೆಆರ್‌ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚಿ ಡಾ ಸುರೇಶ್ ಜಾಧವ ಅವರಿಗೆ ಧನ್ಯವಾದ ಅರ್ಪಿಸಿ ಪ್ರೋತ್ಸಾಹಿಸುವ ಮೂಲಕ ಮಾತನಾಡಿದರು.
“ಹಿಂದಿನ ಆಡಳಿತ ಅಧಿಕಾರಿಗಳು ಸುಮಾರು 30 ಲಕ್ಷ ರೂಪಾಯಿ ಹಗರಣ ಮಾಡಿದ್ದು, ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದರು. ಭ್ರಷ್ಟ ಅಧಿಕಾರಿಗಳ ಕುರಿತು ಮೇಲಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಅವರು ಭ್ರಷ್ಟ ಅಧಿಕಾರಿಯಿಂದಲೇ ಲಂಚ ಪಡೆದು ಕ್ರಮ ಕೈಗೊಳ್ಳುವ ಬದಲಾಗಿ ಆತನಿಗೆ ಬಡ್ತಿ ನೀಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಇಂಡಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಮಾಡುವುದು ನಮ್ಮ ಮುಂದಿನ ಗುರಿಯಾಗಿದೆ. ಸಾರ್ವಜನಿಕರಿಗೆ ಒಳ್ಳೆಯ ಚಿಕಿತ್ಸೆ, ಶುದ್ಧ ಕುಡಿಯುವ ನೀರು, ನ್ಯಾಯಯುತವಾಗಿ ಪಡಿತರ ಧಾನ್ಯ ವಿತರಣೆ ಸೇರಿದಂತೆ ಲಂಚಮುಕ್ತ ಸರ್ಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೋರಾಡುತ್ತಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಅಭಿಪ್ರಾಯ ಕೇಳಿದ್ದು, ರೋಗಿಗಳು ಮತ್ತು ಸಾರ್ವಜನಿಕರೂ ಕೂಡ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
“ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೆಲವು ಕೊರತೆಗಳಿವೆ. ಆದರೆ ತಡವಲಗಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಕೊರತೆ ಇಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಾಗವಾಡ ತಾಲೂಕಿಗೆ ಕಿತ್ತೂರು ರಾಣಿ ಚೆನ್ನಮ್ಮ ವೀರಜ್ಯೋತಿ
“ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡುವುದನ್ನು ಸ್ಥಗಿತಗೊಳಿಸಿದ್ದರು. ಈಗಿನ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಕಾರ್ಯವನ್ನು ಮತ್ತೆ ಆರಂಭಿಸಿದ್ದಾರೆ. ಹಾಗಾಗಿ ನಮಗೆ ಸಾಲ ಸೂಲ ಮಾಡಿ ಒಡವೆ ಮಾರಿ ಖಾಸಗಿ ಆಸ್ಪತ್ರೆಗೆ ₹60 ಸಾವಿರದಿಂದ ₹70 ಸಾವಿರ ಬಿಲ್ ಪಾವತಿ ಮಾಡುವುದು ತಪ್ಪಿದೆ. ಈ ವೈದ್ಯರು ನಮ್ಮ ಪಾಲಿಗೆ ದೇವರು ಇದ್ದಂತೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ವಿಜಯಪುರ ಜಿಲ್ಲಾಧ್ಯಕ್ಷ ಅಶೋಕ್ ಜಾಧವ, ಇಂಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ, ಕಾರ್ಯದರ್ಶಿ ಅಜಿತ್ ಭಾವಿಕಟ್ಟಿ, ಅನಿಲ ಕಪಾಲಿ ಇದ್ದರು.