ಕನ್ನಡ ನಾಮ ಫಲಕ ಹೋರಾಟದಲ್ಲಿ ಪಾಲ್ಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡಿಸಿ, ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಕರವೇ ಪದಾಧಿಕಾರಿಗಳು ನಗರದ ಗಾಂಧಿ ವೃತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಶಾಂತಿಯುತ ಹೋರಾಟ ಕೈಗೊಂಡ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರನ್ನು ಬಂಧಿಸಿರುವ ಸರ್ಕಾರದ ಧೋರಣೆ ಖಂಡನೀಯ. ಪ್ರಾರಂಭದಿಂದಲೂ ಕನ್ನಡ ಉಳಿಸಲು ಅದನ್ನು ಬೆಳೆಸಲು ಮತ್ತು ಸಮೃದ್ಧಗೊಳಿಸಲು ಕರವೇ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಸರ್ಕಾರವು ಇಂತಹುದನ್ನು ಕೂಡ ಗಮನಿಸಬೇಕು” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಕನ್ನಡ ವಿರೋಧಿ ನೀತಿ ಸಹಿಸಲು ನಮಗೆ ಸಾಧ್ಯವಿಲ್ಲ. ಕನ್ನಡಿಗರನ್ನು ಕೆಣಕುವ ಹುನ್ನಾರ ರಾಜ್ಯ ಸರ್ಕಾರದ ಧೋರಣೆಯನ್ನು ಒಪ್ಪುವುದಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಎಸ್ಎಫ್ಐ ಆಗ್ರಹ
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಫೈಯಾಜ್ ಕಲಾದಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಜಾಪುರ್, ದಸ್ತಗಿರಿ ಸಾಲೋಟಗಿ, ಬಸವರಾಜ್, ಆಶಿಫ್ ಫಿರ್ವಾಲೆ, ರವಿ ಮಾರೋಗೋಡ, ಬಸವರಾಜ, ಬಿ ಕೆ ಮನೋಹರ ಸೇರಿದಂತೆ ಇತರರು ಇದ್ದರು.