‘ಸತ್ಯಮೇವ ಜಯತೆ’ ಎನ್ನುವುದು ಮತ್ತೆ ಸಾಬೀತಾಗಿದ್ದು, ಅರವಿಂದ್ ಕೇಜ್ರಿವಾಲ್ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಬಿಜೆಪಿಯ ನಿರಂಕುಶ ಆಡಳಿತ, ಸರ್ವಾಧಿಕಾರಿ ವರ್ತನೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸಿಬಿಐ ಬಳಸಿಕೊಂಡು ಸುಳ್ಳು ಆರೋಪ ಮಾಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕೆಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ವಿಜಯಪುರ ನಗರದ ಎಎಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು.

“ಸುಪ್ರೀಂ ಕೋರ್ಟ್‌ನಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ. ಪ್ರಾಮಾಣಿಕತೆಗೆ ಎಂದೂ ಸೋಲಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಬಿಐ ಸಂಸ್ಥೆಯನ್ನು ಪಂಜರದ ಗಿಣಿ ಎನ್ನುವ ಮೂಲಕ ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲಸ ಮಾಡುತ್ತಿದೆಯೆಂದು ಛೀಮಾರಿ ಹಾಕಿದೆ. ಸಿಬಿಐ ನಡೆ ಬಗ್ಗೆಯೇ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬಿಐ ತಾನು ಬಂಧಮುಕ್ತ ಗಿಣಿಯೆಂದು ನಿರೂಪಿಸಬೇಕು. ಸಂಶಯಾತೀತವಾಗಿ ಕೆಲಸ ಮಾಡಬೇಕೆಂದು ಹೇಳಿದೆ. ಇದು ಸಿಬಿಐ ಯಾರ ಪರ ಕೆಲಸ ಮಾಡುತ್ತಿದೆ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ” ಎಂದರು.
“ಅಧರ್ಮ, ದಬ್ಬಾಳಿಕೆ, ಅನ್ಯಾಯ ತಾತ್ಕಾಲಿಕವಾಗಿ ಗೆಲುವು ಸಾಧಿಸಿದರೂ, ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಇಂದು ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಇಡೀ ಪ್ರಕರಣದಲ್ಲಿ ಜಾಮೀನು ನೀಡಿದ್ದನ್ನು ವಿಫಲ ಮಾಡಲೆಂದೇ ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ, ಜೈಲಿನಲ್ಲೇ ಇಡಲು ಮೋದಿ ಸರ್ಕಾರ ಸಂಚು ಮಾಡಿತ್ತು. ಆದರೆ ನ್ಯಾಯದ ದಾರಿಯಲ್ಲಿ ನಡೆಯುತ್ತಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಸುಳ್ಳು ಆರೋಪಗಳ ಮೇಲೆ ಎಷ್ಟು ದಿನ ಜೈಲಿನಲ್ಲಿಡಲು ಸಾಧ್ಯ, ಸತ್ಯ ಗೆದ್ದೇ ಗೆಲ್ಲುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ಸ್ವಚ್ಛವಾಹಿನಿ’ ಚಾಲಕಿಯರಿಗೆ ವಾಹನ ಪರವಾನಗಿ ವಿತರಿಸಿದ ಸಚಿವ ಮಹದೇವಪ್ಪ
“ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡುವವರಿಗೆ ಭರವಸೆ ನೀಡಿದೆ. ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇನ್ನಾದರೂ ದ್ವೇಷ ರಾಜಕಾರಣ ಬಿಟ್ಟು, ಜನ ಕೊಟ್ಟಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಮಾಡಲಿ” ಎಂದು ಹೇಳಿದರು.