ವಿಜಯಪುರ ಹೊರವಲಯದ ಇಟ್ಟಂಗಿ ಭಟ್ಟಿಯಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಕೂಲಿ ಕಾರ್ಮಿಕರನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ(ಎಸ್‌ಸಿ) ಘಟಕದವರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, “ಅಮಾಯಕ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಂಗಿ ಭಟ್ಟಿ ಮಾಲೀಕನನ್ನು ಗಡಿಪಾರು ಮಾಡಬೇಕು. ಅವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ ಮಾತನಾಡಿ, “ಹಲ್ಲೆಗೊಳಗಾದ ದಲಿತ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಹಾಗೂ ಸರ್ಕಾರ ಕಾರ್ಮಿಕರ ಕುಟಂಬಕ್ಕೆ ಜಮೀನು ಮಂಜೂರು ಮಾಡಬೇಕು. ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು” ಎಂದು ಆಗ್ರಹಿಸಿದರು.
ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮಾಧ್ಯಮ ವಕ್ತಾರ ಸಂಜೀವ ಚವ್ಹಾಣ ಮಾತನಾಡಿ, “ಹಲ್ಲೆ ನಡೆಸಿದವರು ಯಾವುದೇ ಧರ್ಮ, ಜಾತಿಗೆ ಸೇರಿದರೂ ಕೂಡ ಅವರು ಮಾಡಿರುವ ಕೃತ್ಯ ಖಂಡನೀಯ. ಮನುಷ್ಯತ್ವವಿರುವ ಯಾರೇ ಆಗಲಿ ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳುವುದಿಲ್ಲ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ನೊಂದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಳ್ಳಕೆರೆ | ರಸ್ತೆ ಕಾಮಗಾರಿ ಸ್ಥಗಿತ; ಉಪಲೋಕಾಯುಕ್ತ ನ್ಯಾ. ಫಣೀಂದ್ರರಿಗೆ ದೂರು ನೀಡಲು ಸ್ಥಳೀಯರ ನಿರ್ಧಾರ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ, ರಾಘವೇಂದ್ರ ವಡವಡಗಿ, ಮಲ್ಲಿಕಾರ್ಜುನ ಮಡ್ಡಿಮನಿ, ಲಕ್ಷ್ಮಣ ಚಲವಾದಿ, ವಿಠ್ಠಲ ಸಂದಿಮನಿ, ಪರಶುರಾಮ ಪಾರಣ್ಣವರ, ಯಲ್ಲಪ್ಪ ಬಂಡೆನ್ನವರ, ಸತೀಶ ದೊಡ್ಡಮನಿ, ಕೃಷ್ಣಾ ರತ್ನಾಕರ, ಸವಿತಾ ಧನರಾಜ, ನಾಗೇಂದ್ರಪ್ಪ ಮೇತ್ರಿ ಸೇರಿದಂತೆ ಮುಂತಾದವರು ಇದ್ದರು.