ಕ್ರಾಂತಿಕಾರಿ ಭಗತ್‌ಸಿಂಗ್ ಕೇವಲ ಸ್ವಾತಂತ್ರ್ಯದ ಕನಸು ಕಾಣಲಿಲ್ಲ, ಬದಲಾಗಿ ಬ್ರಿಟಿಷರ ನಂತರ ದೇಶದಲ್ಲಿ ಶೋಷಣೆ ರಹಿತ ಸಮಾಜವನ್ನು ಸ್ಥಾಪಿಸುವ ಕನಸು ಕಂಡಿದ್ದರು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಹೇಳಿದರು.
ವಿಜಯಪುರ ನಗರದ ಬೇಗಂ ತಲಾಬ್ ಪಾರ್ಕ್‌ನಲ್ಲಿ ಎಐಡಿವೈಒ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಶಹೀದ್ ಭಗತಸಿಂಗ್. ಗಾಂಧೀಜಿ ಸಂಧಾನಪರ ಪಂಥದ ನಾಯಕರಾದರೆ, ಭಗತಸಿಂಗ್ ನೇತಾಜಿ ಅವರು ಸಂಧಾನರಹಿತ ಪಂಥದ ಅಗ್ರಗಣ್ಯ ನಾಯಕರಾಗಿದ್ದರು. ಇರ್ವಿನ್ ಒಪ್ಪಂದದಲ್ಲಿ ಗಾಂಧೀಜಿಯವರು ಭಗತಸಿಂಗ್, ಸುಖದೇವ, ರಾಜಗುರು ಅವರ ಹೆಸರನ್ನು ಸೇರಿಸದೆ ಇದ್ದಾಗ ನೇತಾಜಿ ಅವರು ಹೆಸರು ಸೇರಿಸಲು ಒತ್ತಾಯಿಸಿದರು. ಆದರೆ ಗಾಂಧೀಜಿ ಭಗತಸಿಂಗ್ ಹಾಗೂ ಅವರ ಅನುಯಾಯಿಗಳನ್ನು ಗೂಂಡಾಗಿರಿಯ ಸಂಕೇತವೆಂದು ಕರೆದರು. ಆದರೆ, ನೇತಾಜೆ ಭಗತ್ ಸಿಂಗ್ ಅವರನ್ನು ದೇಶದ ಸ್ವಾಭಿಮಾನದ ಸಂಕೇತ. ದೇಶದ ಕ್ರಾಂತಿಯ ಸಂಕೇತ ಎಂದು ಕರೆದರು” ಎಂದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಹಿರೇಮಠ ಮಾತನಾಡಿ, “ಈ ದೇಶದಲ್ಲಿ ಮಾನವನಿಂದ ಮಾನವನ
ಶೋಷಣೆ ಕೊನೆಗೊಂಡು ಎಲ್ಲರೂ ಶಿಕ್ಷಣ, ಉದ್ಯೋಗ ಭದ್ರತೆ ಪಡೆಯುವಂತಾಗಲಿ ಎಂಬ ಕನಸನ್ನು ಭಗತ್‌ಸಿಂಗ್ ಕಂಡರು. ಅಂತಹ ಸಮಾಜವಾದಿ ಭಾರತದ ಕನಸನ್ನು ನನಸು ಮಾಡುವ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಇಂದಿನ ಯುವಜನರು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಯುವಜನರು ಆನ್‌ಲೈನ್ ಗೇಮ್, ಅಶ್ಲೀಲ ಸಿನಿಮಾ-ಸಾಹಿತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಂಡವಾಳಶಾಹಿ ವ್ಯವಸ್ಥೆಯ ಆಳ್ವಿಕರು ಯುವಜನರ ಬೆನ್ನೆಲುಬು ಮುರಿಯುವ ಹುನ್ನಾರಗಳನ್ನು ಮಾಡುತ್ತಿದ್ದಾರೆ. ಯುವಜನರು ಜಾತಿ-ಧರ್ಮಗಳ ಮೂಲಕ ಒಡೆಯದೆ ಒಗ್ಗಟ್ಟಾಗಿ ಈ ವ್ಯವಸ್ಥೆಯನ್ನು, ಈ ಹುನ್ನಾರವನ್ನು ಸೋಲಿಸಬೇಕೆಂದು” ಕರೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕೊಂಡಗೂಳಿ, ಉಪಾಧ್ಯಕ್ಷ ಅಶೋಕದೇಸಾಯಿ, ರಮೇಶ, ವಿರೂಪಾಕ್ಷಿ ಮುಂತಾದವರು ಪಾಲ್ಗೊಂಡಿದ್ದರು.