2002ರ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಏಳು ಮಂದಿ ಕುಟುಂಬಸ್ಥರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರ್ವೋಚ್ಛ ನ್ಯಾಯಾಲಯವು ನ್ಯಾಯವನ್ನು ಎತ್ತಿ ಹಿಡಿದಿರುವುದರಿಂದ ಗುಜರಾತ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಪ್ರಗತಿ ಪರ ಸಂಘಟನೆಗಳು ಅಭಿಪ್ರಾಯಿಸಿದೆ.
ಗುಜರಾತ್ ಸರ್ಕಾರದ ನಡೆಯ ವಿರುದ್ಧ ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
“ಬಿಲ್ಕಿಸ್ ಬಾನೊ ಪ್ರಕರಣದ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ತೀರ್ಮಾನವನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಗೊಳಿಸಿ, ಅಪರಾಧಿಗಳು ಎರಡು ವಾರದೊಳಗೆ ಶರಣಾಗುವಂತೆ ಆದೇಶಿಸಿರುವುದು ಗುಜರಾತ್ ಸರ್ಕಾರಕ್ಕೆ ಕಪೋಳಮೋಕ್ಷ ಮಾಡಿದಂತಾಗಿದೆ” ಎಂದು ಪ್ರತಿಭಟನಾಕಾರರು ತಿಳಿಸಿದರು.
“ಗುಜರಾತ್ ಸರ್ಕಾರವು ಯಾವ ರೀತಿ ಮಹಾರಾಷ್ಟ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಕೈಹಾಕಿ ಕ್ಷುಲ್ಲಕ ರಾಜಕೀಯ ಕಾರಣಕ್ಕಾಗಿ ಮಹಿಳೆಯರ ಮೇಲಿನ ಅಪರೂಪದಲ್ಲಿ ಅಪರೂಪದ ದೌರ್ಜನ್ಯ ಪ್ರಕರಣದ ಅಪರಾಧಿಗಳನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡಿದೆ ಎಂಬುದನ್ನು ಈ ತೀರ್ಪು ಎತ್ತಿ ತೋರಿಸಿದೆ. ಗುಜರಾತ್ ಬಿಜೆಪಿ ಸರ್ಕಾರದ ಈ ಕ್ರಮವನ್ನು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಮಾಜಿ ಕಾರು ಚಾಲಕ ಮತ್ತು ಆತನ ಪತ್ನಿ ಮೇಲೆ ಭವಾನಿ ರೇವಣ್ಣ ಹಲ್ಲೆ – ಆರೋಪ; ಮಹಿಳೆಯರ ಪ್ರತಿಭಟನೆ
ಈ ಸಂದರ್ಭದಲ್ಲಿ ಭೀಮಸಿ ಕಲಾದಗಿ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾದರ್ ತಿಯೋಲ್ ಮಾಚಾದೊ, ಪ್ಲಮ್ ಸಮಿತಿಯ ಅಧ್ಯಕ್ಷ ಅಕ್ರಮ ಮಾಶಾಳಕರ್, ಗ್ರಾಮೀಣ ಬ್ಯಾಂಕ್ ಯೂನಿಯನ್ ಮುಖಂಡ ಜಿ ಜಿ ಗಾಂಧಿ, ಸಿ ಎ ಗಂಟಪ್ಪಗೋಳ, ಮಹಿಳಾ ಮುಖಂಡರುಗಳಾದ ಸುರೇಖಾ ರಜಪೂತ, ನಿರ್ಮಲ ಹೊಸಮನಿ, ಶಿವಬಾಳಮ್ಮ ಕೊಂಡಗೊಳಿ, ಸುನಿತಾ ಮೋರೆ, ವಿದ್ಯಾವತಿ ಅಂಕಲಗಿ, ಮುಖಂಡರುಗಳಾದ ಅಪ್ಪಸಾಹೇಬ ಯರನಾಳ, ಸಿದ್ದಲಿಂಗ ಬಾಗೇವಾಡಿ, ಲಕ್ಷ್ಮಣ ಹಂದ್ರಾಳ, ಎಚ್ ಟಿ ಭರತಕುಮಾರ, ದಸ್ತಗಿರಿ ಉಕ್ಕಲಿ, ಮೀನಾಕ್ಷಿ ಸಿಂಗೆ, ಭೂಮಿ ಕಾಮಿನಿ ಇದ್ದರು.