ಬರಗಾಲದಿಂದ ತತ್ತರಿಸಿ ಕಂಗಾಲಾಗಿರುವ ರೈತರಿಗೆ ಕಾಲುವೆಯ ನೀರು ಇಲ್ಲದೇ, ಬೆಳೆ ಒಣಗುತ್ತಿವೆ ಇರುವ ಅಲ್ಪಸ್ವಲ್ಪ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಕೂಡಲೇ ಕೋಲಾರ, ನಿಡಗುಂದಿ, ತಾಲೂಕಿನಲ್ಲಿರುವ ಮುಳವಾಡ ಏತನೀರಾವರಿಯ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹೆದ್ದಾರಿ ಬಂದ್ಗೆ ಕರೆಕೊಟ್ಟಿದೆ.
ಮಂಗಳವಾರದಂದು (ಜ.22) ರೈತರೊಂದಿಗೆ ಕೋಲಾರದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾರಾಯಣಪುರ ಆಣೆಕಟ್ಟಿನ ಎಡ ಹಾಗೂ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುತ್ತಿರುವುದು ಖುಷಿಯ ವಿಚಾರ, ಅದರಂತೆ ನಮ್ಮ ಬೆಳೆಗಳು ಉಳಿಯಬೇಕು ಜಾನುವಾರುಗಳಿಗೆ ಕುಡಿಯಲು ನೀರು ಬೇಕೆ ಬೇಕು. ಆದ್ದರಿಂದ ಜನೇವರಿ 22ರ ಒಳಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ.
ಮಳೆಯ ಅಭಾವದಿಂದ ಇರುವ ಭಾವಿ, ಭೋರವೆಲ್ಗಳಲ್ಲಿ ನೀರಿಲ್ಲದೇ ಜಮೀನಿನಲ್ಲಿ ಇರುವ ಗೋಧಿ, ಕಡ್ಲಿ, ಶೇಂಗಾ, ಸೂರ್ಯಕಾಂತಿ, ಮೇಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ, ರೈತ ಉಳಿಯಬೇಕಾದರೆ ಕಾಲುವೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.