ಶೋಷಣೆ ಮುಕ್ತ ಕೃಷಿ ಪರಿಸರ ಹಾಗೂ ಸುಸ್ಥಿರ ಆದಾಯದ ಮೂಲಗಳನ್ನು ಸೃಜಿಸಲು ಜಾರಿಯಾಗಿರುವ ಎಫ್‌ಪಿಒಗಳೊಂದಿಗೆ ಸೃಜನಾತ್ಮಕ ಹೆಜ್ಜೆಯನ್ನಿಡಲು ರೈತರು ಮುಂದಾಗಬೇಕೆಂದು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಕೊಪ್ಪ ಕರೆ ನೀಡಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸಮೀಪದ ಚೊಂಡಿ ಗ್ರಾಮದ ವೇ. ಸಿದ್ದಯ್ಯ ಹಿರೇಮಠ ಇವರ ಪುಣ್ಯಾಶ್ರಮದಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿಯಮಿತದ ಪ್ರಾದೇಶಿಕ ಕೇಂದ್ರ, ಬೆಳಗಾವಿ, ಶ್ರೀ ಪರಮಾನಂದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹರನಾಳ ಹಾಗೂ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪಾಲುದಾರ ರೈತರ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರೈತರಿಗೆ ಅಗತ್ಯವಿರುವ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಮಹತ್ಕಾರ್ಯಕ್ಕೆ ಭೂಮಿಕೆಯಂತಿರುವ ಎಫ್‌ಪಿಒ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಹೆಚ್ಚಿನ ರೈತರ ಪಾಲ್ಗೊಳ್ಳುವಿಕೆ ಮುಖ್ಯ” ಎಂದರು.
ನಿವೃತ್ತ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಕೃಷಿ ವ್ಯವಹಾರದ ಪ್ರತಿ ಹಂತದಲ್ಲಿ ಅಡಕವಾಗಿರುವ ಮೋಸದ ಚಕ್ರವ್ಯೂಹವನ್ನು ಭೇದಿಸಲು ರೈತ ಉತ್ಪಾದಕ ಕಂಪನಿ ಬ್ರಹ್ಮಾಸ್ತ್ರವಾಗಿದ್ದು, ರೈತರು ನಿರ್ಭೀತಿಯಿಂದ ಕಂಪನಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಉಪ ತಹಶೀಲ್ದಾರ್ ಆರ್ ಬಿ ಸಜ್ಜನ ಮಾತನಾಡಿ, “ರೈತ ಉತ್ಪಾದಕ ಕಂಪನಿ ನಿರ್ಮಾಣದ ಹಿಂದಿರುವ ಗುರಿ, ಉದ್ದೇಶ ಮತ್ತು ನಿಯಮಗಳನ್ನು ಪ್ರತಿಯೊಬ್ಬ ರೈತರೂ ಅರ್ಥ ಮಾಡಿಕೊಂಡು ಕಂಪನಿ ಮುನ್ನೆಡೆಸುವ ಜವಾಬ್ದಾರಿ ಮತ್ತು ಕರ್ತವ್ಯ ನಿಭಾಯಿಸಲು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? 2 ವರ್ಷದಿಂದ ನಡೆಯುತ್ತಿದೆ ಚನ್ನರಾಯಪಟ್ಟಣ ರೈತ ಹೋರಾಟ; ಜುಲೈ 23ರಂದು ಮುಖ್ಯಮಂತ್ರಿ ಮನೆಗೆ ಜಾಥಾ
ಸಾನಿಧ್ಯ ವಹಿಸಿದ್ದ ಅಗಸಬಾಳದ ಶರಣಯ್ಯ ಹಿರೇಮಠ ಮಾತನಾಡಿ, “ರೈತ ಕಲ್ಯಾಣ ಕಾರ್ಯಗಳನ್ನು ಕೈಗೆತ್ತಿಕೊಂಡು ಸರ್ಕಾರದ ನಿಯಮಕ್ಕೊಳಪಟ್ಟು ಖಾಸಗಿ ವ್ಯವಸ್ಥೆಯೊಂದಿಗೆ ಕಾರ್ಯೋನ್ಮುಖವಾಗಲು ಸಿದ್ದವಾಗಿರುವ ರೈತರೇ ಕೂಡಿ ಕಟ್ಟಿದ ಕಂಪನಿ ಮೇಲಿನ ನಮ್ಮೆಲ್ಲರ ವಿಶ್ವಾಸ ಹೆಚ್ಚಾಗಬೇಕು” ಎಂದರು.
ವೇದಿಕೆ ಮೇಲೆ ಬಸನಗೌಡ ಪಾಟೀಲ(ಅಗಸಬಾಳ), ನಿರ್ದೇಶಕ ಸೋಮಲಿಂಗಪ್ಪ ಗಸ್ತಿಗಾರ, ಕಲ್ಲಣ್ಣ ಪ್ಯಾಟಿ, ಅಭಿಯಂತರ ಎಸ್ ಬಿ ರಾಮತಾಳ, ಗೌಡಪ್ಪಗೌಡ ಮೇಟಿ ಸೇರಿದಂತೆ ಹಲವರು ಇದ್ದರು.
