ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿನ 9 ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಮತ್ತು ಅಳತೆ ಮಾಪನಗಳನ್ನು ಪರಿಶೀಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರಿಗೆ ಮನವಿ ಸಲ್ಲಿಸಿದರು.
“ರಾಜ್ಯ ಸರ್ಕಾರದ ಸಕ್ಕರೆ ಇಲಾಖೆಯು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಸಕ್ಕರೆ ಹಂಗಾಮಿನ ಹೊಸ ಎಫ್‌ಆರ್‌ಪಿ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ. ಯಾವ ಕಾರ್ಖಾನೆಗೆ ಎಷ್ಟು ದರವೆಂದು ನಿಗದಿಪಡಿಸಿರುವ ಪಟ್ಟಿಯನ್ನು ನೀಡಿದೆ. ಅದರಂತೆ ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಸಕ್ಕರೆ ಕಾರ್ಖಾನೆಗಳು ದರ ನೀಡಬೇಕು” ಎಂದು ಹೇಳಿದರು.
“ಇಂಡಿಯನ್ ಶುಗರ್ಸ್-3156, ಜಮಖಂಡಿ ಶುಗರ್ಸ್- 3254, ಪಿ ಆರ್ ಶುಗರ್ಸ- 3365, ಮನಾಲಿ ಶುಗರ್ಸ್- 2920, ನಂದಿ ಶುಗರ್ಸ್-3454, ಸಂಗಮನಾಥ ಶುಗರ್ಸ್- 2920, ಬಾಲಾಜಿ ಶುಗರ್ಸ್- 3374, ಬಸವೇಶ್ವರ ಶುಗರ್ಸ್- 3408 ಮತ್ತು ಭೀಮಾಶಂಕರ್ ಶುಗರ್ಸ್- 3221 ಈ ರೀತಿಯಾಗಿ ಎಫ್‌ಆರ್‌ಪಿ ದರವನ್ನು ನಿಗದಿಪಡಿಸಿ ರೈತಪರವಾದ ಒಳ್ಳೆಯ ಆದೇಶವನ್ನು ನೀಡಿದೆ. ಆದರೆ ಬಹುಕಾಲದಿಂದಲೂ ಸಕ್ಕರೆ ಕಾರ್ಖಾನೆಯ ಮಾಲೀಕರಿಗೂ ಮತ್ತು ತಮ್ಮ ಅದೀನ ಬರುವ ಎಲ್ಲ ವೇಬ್ರಿಜ್ ಮಾಲೀಕರ ಜೊತೆಯಲ್ಲಿ ಒಳಒಪ್ಪಂದ ಮಾಡಿಕೊಂಡು ತೂಕ ಮತ್ತು ಅಳತೆಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ” ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಕಲ್ಯಾಣದಲ್ಲಿ ಅ. 28 ರಿಂದ ಮೂರು ದಿನ ʼಕಲ್ಯಾಣ ಪರ್ವʼ
“ಇದೇ ನವೆಂಬರ್ ತಿಂಗಳಲ್ಲಿ ಕಬ್ಬು ನುರಿಸುವ ಕೆಲಸ ಆರಂಭವಾಗುತ್ತದೆ. ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ತಮ್ಮ ಫಸಲನ್ನು ಕಾರ್ಖಾನೆಗೆ ಕಳುಹಿಸಿದಾಗ ಕಬ್ಬಿನ ತೂಕ ಮತ್ತು ಅಳತೆಯಲ್ಲಿ ಪ್ರತಿ ರೈತರಿಂದ ಎರಡರಿಂದ ಮೂರು ಟನ್‌ಗಳಷ್ಟು ಮೋಸ ಮಾಡಲಾಗುತ್ತಿದೆ. ಅಧಿಕಾರಿಗಳು ಭೇಟಿ ನೀಡಿದಾಗ ತೂಕ ಮಾಪನಗಳನ್ನು ಸರಿಪಡಿಸಿಕೊಳ್ಳುತ್ತಾರೆ. ನಂತರ ಅದೇ ಚಾಳಿಯನ್ನು ಮುಂದುವರಿಸುತ್ತಾರೆ. ಹಾಗಾಗಿ ಇಲಾಖೆಯು ಇದಕ್ಕೊಂದು ಶಾಶ್ವತ ಪರಿಹಾರ ಕೈಗೊಳ್ಳುವುದರ ಮೂಲಕ ರೈತ ಪರವಾದ ನಿಲುವು ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ರಾಜ್ಯ ಸಂಘಟನೆ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ರಾಕೇಶ ಇಂಗಳಗಿ, ಹಮೀದ ಇನಾಮ್ದಾರ್, ಪ್ರವೀಣ ಕನಸೆ, ವಿಕ್ರಮ ವಾಗ್ಮೊರೆ ಮತ್ತು ಶ್ರೀಶೈಲ ಮಠ ಇದ್ದರು.