ಮಕ್ಕಳಿಗೆ ಶಿಕ್ಷಣದ ಮಹತ್ವದ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಜವಾಬ್ದಾರಿ ಮತ್ತು ಕಲಿಕಾ ಕೇಂದ್ರಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವುದರ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರತರಬೇಕು ಎಂದು ಶಿಕ್ಷಕರಿಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ್ ಅವಟಿ ತಿಳಿಸಿದರು.
ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಚಿಗುರು ಕಲಿಕಾ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಿದ್ದ ʼಚಿಗುರು ಕಲಿಕಾ ಕೇಂದ್ರಗಳ ಮಕ್ಕಳ ಮೇಳʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಫಾದರ್ ರೋನಿ ಮಾತನಾಡಿ, “ಕ್ರಿಸ್‌ಮಸ್ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಸಹಾಯ ನೀಡುವುದಾಗಿದೆ. ನಾವೆಲ್ಲರೂ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಹೆಸರನ್ನು ಸಂಪಾದಿಸಬೇಕಾಗಿದೆ. ಈ ಮೂಲಕ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಫಾದರ್ ಟಿಯೋಲ ಮಚಾದೊ ಮಾತನಾಡಿ, “ಕಲಿಕಾ ಕೇಂದ್ರಗಳು ಪ್ರಸ್ತುತದಲ್ಲಿ ಸ್ಲಂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಲಿಕಾ ಕೇಂದ್ರಗಳು ಪ್ರಾರಂಭವಾಗಬೇಕಿದೆ. ಈ ಮೂಲಕ ಪ್ರತಿ ಮಗುವಿಗೂ ಶಿಕ್ಷಣ ದೊರೆದಂತಾಗಬೇಕು. ಕಲಿಕಾ ಕೇಂದ್ರಗಳು ಕೇವಲ ಪಠ್ಯಕ್ಕೆ ಮಾತ್ರ ಒತ್ತು ಕೊಡದೆ ಮಕ್ಕಳ ನೈಜ ಪ್ರತಿಭೆಗಳನ್ನು ಹೊರತರುವ ಕೇಂದ್ರಗಳಾಗಿವೆ. ಬರುವ ವರ್ಷದಲ್ಲಿ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಲಿ” ಎಂದು ಕ್ರಿಸ್‌ಮಸ್ ಹಬ್ಬದ ಶುಭಾಷಯ ಕೋರಿ ಆಶಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು
ಇದೇ ವೇಳೆ ಮಕ್ಕಳಿಗೆ ವಿವಿಧ ಆಟೋಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಲ ಮಚಾದೊ, ಫಾದರ್ ರೋನಿ ಹಾಗೂ ಬ್ರದರ್ ಚೇತನ್ ಹಾಗೂ ಚಿಗುರು ಕಲಿಕಾ ಕೇಂದ್ರದ ಶಿಕ್ಷಕಿಯರು ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆ ಸಿಬ್ಬಂದಿ ವರ್ಗದವರು ಮತ್ತು 8 ಕಲಿಕಾ ಕೇಂದ್ರದಿಂದ 200 ಮಂದಿ ಮಕ್ಕಳು ಕಾರ್ಯಕ್ರಮದಲ್ಲಿ ಇದ್ದರು.