ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಬೂದಿಹಾಳ-ಪಿರಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ಯೋಜನೆಯ ಕ್ರಿಯಾಶೀಲ ವೇದಿಕೆಯಿಂದ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಸಚಿವರ ಸ್ವಗೃಹದಲ್ಲಿ ಬೂದಿಹಾಳ-ಪೀರಾಪುರ ನೀರಾವರಿ ಯೋಜನೆ ಕ್ರಿಯಾಶೀಲ ವೇದಿಕೆಯ ಪದಾಧಿಕಾರಿಗಳು ಹಾಗೂ ಮಾಜಿ ಸಿಂದಗಿ ಶಾಸಕ ಶರಣಪ್ಪ ಸುಣಗಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
“ಯೋಜನೆಗೆ ಸರ್ಕಾರ ಈಗಾಗಲೇ ಸುಮಾರು 800 ಕೋಟಿ ಹಣ ಖರ್ಚು ಮಾಡಿದೆ. ನೀರು ಟ್ರೈಯಲ್ ರನ್ ಔಟ್ ಬಾಕ್ಸ್‌ವರೆಗೆ ತಲುಪಿದೆ. ಇನ್ನು ಹೊಲಗಾಲುವೆಯ ಶೇ.10ರಷ್ಟು ಕೆಲಸ ಮಾತ್ರ ಬಾಕಿ ಇದ್ದು, ಬೇಸಿಗೆಯಲ್ಲಿ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸಬೇಕಿದೆ. ಅದಕ್ಕಾಗಿ ಸರ್ಕಾರ ₹170-200 ಕೋಟಿ ಮಂಜೂರು ಮಾಡಿದೆ. ಈ ಭಾಗದ 50,607 ಎಕರೆ ಕೃಷಿ ಭೂಮಿ ನೀರಾವರಿಗೆ ಒಳಪಡುತ್ತದೆ. ರೈತರು, ಯುವಕರು ನಗರ ಪ್ರದೇಶಕ್ಕೆ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಪಕ್ಷಾತೀತವಾಗಿ ಈಯೋಜನೆ ಪೂರ್ಣಗೊಳಿಸಿದರೆ 38 ಗ್ರಾಮಗಳ ಲಕ್ಷಕ್ಕೂ ರೈತರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದ್ದರಿಂದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತ್ವರಿತ ಗತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಬೇಕು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ವಿಜಯಪುರ | ವಾರ್ಡ್ ನಂ. 29ರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಗಿರೀಶ್ ಬಿರಾದಾರ್ ಗೆಲುವು
ಈ ವೇಳೆ ಮುಖಂಡರಾದ ಪ್ರಭುಗೌಡ ಬಿರಾದಾರ, ಹನುಮಗೌಡ ಬಿರಾದಾರ, ಕಾಶಿನಾಥ ತಳವಾರ, ಮಲ್ಲಣ್ಣ ಹಿರೇಕುರುಬರ, ಸಂಗನಗೌಡ ನಾಗರೆಡ್ಡಿ, ಮಹಾದೇವವಾಲಿಕಾರ, ಸಿದ್ದನಗೌಡ ಬಿರಾದಾರ, ರುದ್ರಗೌಡ ಬಿರಾದಾರ, ಶಿವಪುತ್ರ ಚೌದ್ರಿ ಹಾಗೂ ಗುರುರಾಜ ಪಡಶೆಟ್ಟಿ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.