ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ನೂತನ ತಾಲೂಕ ಘಟಕವನ್ನು ರಚಿಸಲಾಗಿದೆ. ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಮಾತನಾಡಿದ ಡಿವಿಪಿ ಮುಖಂಡ ಅಕ್ಷಯ್ ಕುಮಾರ್ ಅಜಮನಿ, “ಶೋಷಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಮತ್ತು ಸರ್ವತೋಮುಖ ಜಾಗೃತಿಗಾಗಿ ಡಿವಿಪಿ ಸಂಘಟನೆ ಕಟ್ಟಲಾಗಿದೆ. ಸುಮಾರು ವರ್ಷಗಳಿಂದ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ” ಎಂದು ಹೇಳಿದರು.
“ಅಂಬೇಡ್ಕರ್ ಸಿದ್ದಾಂತದೊಂದಿಗೆ ಸಂಘಟನೆ ಮುನ್ನಡೆಯುತ್ತಿದೆ. ನಮ್ಮ ಪೂರ್ವಜರ ಇತಿಹಾಸ ಮತ್ತು ಆಚಾರ ವಿಚಾರವನ್ನು ರಾಜ್ಯದ ಮೂಲೆ ಮೂಲೆಗೂ ತಿಳಿಸುವ ಕಾರ್ಯವನ್ನ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮಾಡುತ್ತಿದೆ” ಎಂದು ತಿಳಿಸಿದರು.
“ಸಂಘಟನೆಯು ರಾಜ್ಯ ಮಟ್ಟದ ಕಾರ್ಯಕ್ರಮಗಳು, ಪ್ರಶಸ್ತಿ ಪ್ರಧಾನ ಸಮಾರಂಭಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನದ ವಿಮೋಚನೆ ಕಡೆಗೆ ಮುಖ ಮಾಡುತ್ತಿದ್ದಾರೆ” ಎಂದರು.
ಸಭೆಯಲ್ಲಿ ಸತೀಶ್ ಅಂಜುಟಗಿ, ವಿನೋದ ಕಾಳೆ, ರವಿ ಶಿಂಗೆ, ದೇವಾನಂದ ಶಿಂಗೆ, ಆಕಾಶ್ ಕಾಳೆ, ಶರಣು ಪೋತೆ ಇತರರು ಇದ್ದರು.