ಸಂವಿಧಾನ ಹಬ್ಬ ಆಚರಿಸುವ ಮೂಲಕ ನಾವೆಲ್ಲರೂ ಸಂವಿಧಾನದ ಪರ ಇದ್ದೇವೆಂದು ತೋರಿಸಿಕೊಟ್ಟಿದ್ದೇವೆ. ಸಂವಿಧಾನ ಎಲ್ಲ ಸಮುದಾಯಗಳ ಪರವಿದೆ. ಎಲ್ಲರೂ ಸಮಾನತೆ ಹಾಗೂ ಘನತೆಯ ಬದುಕನ್ನು ಬದುಕಲು ಅವಕಾಶ ಕೊಟ್ಟಿದೆ. ಅನ್ಯಾಯದ ವಿರುದ್ದ, ಶೋಷಿತರ ಪರವಾಗಿ ನಮ್ಮ ಸಂವಿಧಾನ ನ್ಯಾಯ ಒದಗಿಸುತ್ತದೆ ಎಂದು ವಿಜಯಪುರ ಜಿಲ್ಲಾ ಕಾನೂನು ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಎಸ್ ಹಂಗರಗಿ ಹೇಳಿದರು.
ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆಯಿಂದ ನಗರದ ಬಾರಾಕಮಾನ ಉದ್ಯಾನವನದಲ್ಲಿ ನವೆಂಬರ್ 26ರಂದು ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶರಣ ಚಿಂತಕರು ಹಾಗೂ ಪ್ರಗತಿಪರ ಹೋರಾಟಗಾರ ಜೆ ಎಸ್ ಪಾಟೀಲ್, ಮಾತನಾಡಿ, “ಕಳೆದ 75 ವರ್ಷಗಳಿಂದ ನಮ್ಮನ್ನು ಸಂವಿಧಾನ ರಕ್ಷಿಸುತ್ತಿದೆ. ನಾವು ನಮ್ಮ ಮನೆಗಳಲ್ಲಿ ಬೇರೆ ಬೇರೆ ಹಬ್ಬ ಸಂಪ್ರದಾಯಗಳನ್ನು ಆಚರಿಸುತ್ತೇವೆ. ಆದರೆ ಇವತ್ತು ನಮಗೆಲ್ಲ ಶಿಕ್ಷಣ ಪಡೆಯುವ ಹಕ್ಕು ಕೊಟ್ಟಿರುವುದು ನಮ್ಮ ಹೆಮ್ಮೆಯ ಸಂವಿಧಾನ. ಈ ಸಂವಿಧಾನ ರಚಿಸುವುದರಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರರ ಶ್ರಮ ಹಾಗೂ ತ್ಯಾಗ ಅಪಾರ” ಎಂದು ಸ್ಮರಿಸಿದರು.
“ಬುದ್ದ ಬಸವಣ್ಣನವರ ಆಶಯಗಳು ನಮ್ಮ ಸಂವಿದಾನದಲ್ಲಿ ಅಡಕವಾಗಿವೆ. ಎಲ್ಲ ಜಾತಿ ಜನಾಂಗದವರಿಗೂ ಸಮಾನ ನ್ಯಾಯ ಬದ್ಧತೆಯಿದೆ. ಆದರೆ ಕೆಲವು ವರ್ಗದ ಜನರು ನಮ್ಮ ಸಂವಿಧಾನ ಬದಲಾಗಬೇಕೆಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ ಇನ್ನೂ ನೂರು ವರ್ಷವಾದರೂ ನಮ್ಮ ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ” ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಶ್ರೀಮತಿ ವಿಧ್ಯಾವತಿ ಅಂಕಲಗಿ ಎವರು ಮಾತನಾಡುತ್ತ ನಮ್ಮ ಸಂವಿಧಾನ ತುಂಬಾ ಮಹತ್ವದಾಗಿದೆ. ಇಂದು ಸಂವಿಧಾನ ಇರಲಿಲ್ಲ ಅಂದರೆ ನಾವೆಲ್ಲಾ ಇವತ್ತು ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಸೇರುತ್ತಿರಲಿಲ್ಲ. ಎಲ್ಲರಲ್ಲೂ ಬ್ರಾತೃತ್ವ ಭಾವನೆಯಿಂದ ಒಗ್ಗೂಡಿಸುವುದೇ ನಮ್ಮ ಸಂವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಪ್ರಾನ್ಸಿಸ್ ಮ್ಯಾನೆಜಸ್ಸ ಮಾತನಾಡಿ, “ಇಂದು ನಮ್ಮ ಸಂವಿಧಾನ ಹಬ್ಬ ಆಚರಿಸುತ್ತಿರುವ ನಾವು ಸಂವಿಧಾನ ಉಳಿಸುತ್ತೇವೆ ಮತ್ತು ಬೆಳೆಸುತ್ತೇವೆಂದು ಸಂಕಲ್ಪ ಮಾಡೋಣ. ಸಂವಿಧಾನದ ಪ್ರಕಾರ ನಡೆಯೋಣ ಹಾಗೂ ನುಡಿಯೋಣ. ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ” ಎಂದು ಹೇಳಿದರು.
ಫಾದರ್ ಟಿಯೋಲ್ ಮಚಾದೊ ಪ್ರಾಸ್ತಾವಿಕವಾಗಿ ಮಾತನಾಡಿ, “ನಮ್ಮ ಸಂವಿಧಾನ ಪೀಠಿಕೆಯಲ್ಲಿ ನಾವು ಹಿಂದುಗಳು, ಮುಸ್ಲಿಂರು, ಕ್ರೈಸ್ತರೆಂದು ಹೇಳಲಿಲ್ಲ, ʼಭಾರತದ ಪ್ರಜೆಗಳಾದ ನಾವುʼ ಎಂದು ಹೇಳುತ್ತದೆ. ಭಾರತ ದೇಶದಲ್ಲಿರುವ ನಾವೆಲ್ಲರೂ ಒಂದೆ. ನಾವು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ಹಾಗಾಗಿ ಇಂದು ನಮ್ಮ ನಮ್ಮ ಮನೆಯಿಂದ ತಂದಿರುವ ಊಟದ ಬುತ್ತಿಯನ್ನು ಪರಸ್ಪರ ಹಂಚಿಕೊಂಡು ಸಹಭೋಜನ ಮಾಡುವ ಮೂಲಕ ನಾವೆಲ್ಲರೂ ಒಂದೇ ಕುಟುಂಬವದರೆಂದು ಗಂಟಾಘೋಷವಾಗಿ ಸಾರೋಣ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ರೈತ, ಕಾರ್ಮಿಕರ ಎಚ್ಚರಿಕೆ ಜಾಥಾ
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು ಸಂವಿಧಾನ ಕುರಿತಾಗಿದ್ದು, ಎಲ್ಲರೂ ಆಸಕ್ತಿಯಿಂದ ಭಾಗಿಯಾಗಿ ಬಹುಮಾನಗಳನ್ನು ಪಡೆದುಕೊಂಡರು. ಮಕ್ಕಳ ಸಾಂಸೃತಿಕ ಕಾರ್ಯಕ್ರಮಗಳು ಲಂಬಾಣಿ ನೃತ್ಯ, ಮಂಗಳಮುಖಿಯರ ಹಾಡು ಸಂವಿಧಾನ ಕುರಿತಾಗಿ ಕಿರುನಾಟಕ ಎಲ್ಲರ ಗಮನ ಸೇಳೆದವು.
ಕಾರ್ಯಕ್ರಮದಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಯ ಪಧಾದಿಕಾರಿಗಳಾದ ಗಂಗಾಧರ ಹಿರೇಮಠ, ಆಶೋಕ ಕಾಳೆ, ರಿಯಾನಾ, ಶಬ್ಬೀರ್ ಕಾಗಜಕೋಟ, ಸರ್ಕಾರಿ ಶಾಲಾ ಶಿಕ್ಷಕರು, ಮಕ್ಕಳು ಇದ್ದರು.