ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ನಗರದ ಬಾರಾಕಮಾನ್‌ನಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಲ್ ಮಾಚದೊ ಮಾತನಾಡಿ, ‘ಸಂವಿಧಾನದಿಂದ ಸಮಾನತೆ, ಸೌಹಾರ್ದತೆ, ಭಾವೈಕತೆಯನ್ನು ಹೊಂದಿದ್ದೇವೆ. ಇಂದು ನಾವು ಸಂವಿಧಾನ ಹಬ್ಬವನ್ನು ಆಚರಿಸುತ್ತಿದ್ದೇವೆ. ಅದರ ನಿಮಿತ್ತ ಸಹಭೋಜನ ಆಯೋಜನೆಯಾಗಿದೆ. ಊಟವೆಂದರೆ ನಾವು ರೈತರನ್ನು, ವ್ಯಾಪಾರಿಗಳನ್ನು ಹಾಗೂ ಅಡುಗೆ ಮಾಡಿರುವವರನ್ನು ನೆನೆಯುತ್ತೇವೆ. ಇಂದು ನಾವೆಲ್ಲರೂ ಊಟವನ್ನು ಹಂಚಿಕೊಂಡು ನಮ್ಮಲ್ಲಿ ಸೌಹಾರ್ದತೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ. ನಾವು ಎಲ್ಲರೂ ಸಮಾನವಾಗಿ ಭಾಗವಹಿಸಿದ್ದೇವೆ. ಜೊತೆಜೊತೆಗೆ ನಾವು ಎಲ್ಲರೂ ಒಂದೆ ಎಂಬ ಭಾವನೆ ನಮ್ಮಲ್ಲಿದೆ’ ಎಂದರು.
ಪ್ರಗತಿಪರ ಸಂಘಟನೆ ಮುಖಂಡರಾದ ಭರತ್ ಕುಮಾರ್ ಎಚ್.ಟಿ. ಮಾತನಾಡಿ, ‘ಸಂವಿಧಾನದ ಆಸೆಯ ಕುರಿತು ದೇಶದಲ್ಲಿ ಎಲ್ಲರೂ ಮಾತನಾಡುತ್ತಾರೆ. ಆದರೆ, ಅದನ್ನು ಯಾರೂ ಕೂಡ ಪಾಲನೆ ಮಾಡುವುದಿಲ್ಲ. ಸಂವಿಧಾನ ಪ್ರತಿಜ್ಞೆ ಮಾಡುವಾಗ ನಾವು ಧರ್ಮ, ದೇಶ, ಅಂತ ಹೇಳುವುದಿಲ್ಲ ಪ್ರಾರಂಭದಲ್ಲೇ ಭಾರತ ದೇಶದ ಪ್ರಜೆಗಳಾದ ನಾವು ಸಂವಿಧಾನದ ಆಶಯ ಮತ್ತು ಗೌರವಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಆದರೆ, ಈಗಿನ ಸರಕಾರಗಳು ಸಂವಿಧಾನವನ್ನು ತಿರುಚುವಂತಹ ಕೆಲಸ ಮಾಡುತ್ತಿವೆ’ ಎಂದರು.
‘ಸಂವಿಧಾನವು ಧರ್ಮ ನಿರಪೇಕ್ಷತೆ, ಭ್ರಾತೃತ್ವ ಸಹಬಾಳ್ವೆಯನ್ನು ಬೋಧಿಸುತ್ತದೆ. ವಾಸ್ತವ ಸ್ಥಿತಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಕೆಟ್ಟ ಪರಿಸ್ಥಿತಿಯಲ್ಲಿ ನಾವು ನಮ್ಮ ಸಂವಿಧಾನ ದಿನಾಚರಣೆ ಮಾಡುತ್ತಿದ್ದೇವೆ’ ಎಂದರು.
ಫಾದರ್ ಪ್ರಶಾಂತ್ ಮಾತನಾಡಿ, ‘ನಾವು ಸಂವಿಧಾನದ ಮಹತ್ವ ತಿಳಿಯಬೇಕು. ಅದರ ರಚನೆಯ ಜವಾಬ್ದಾರಿಯನ್ನು ಹೊತ್ತ ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ಕಷ್ಟ ನಮಗೆ ಗೊತ್ತಿಲ್ಲ. ಕಾರಣ ನಾವು ಇಂದು ಸಂವಿಧಾನದ ಮಹತ್ವವನ್ನು ತಿಳಿಯುತ್ತಿಲ್ಲ. ಸಂವಿಧಾನ ನಮಗೆ ಸಮಾನತೆ ಸೌಹಾರ್ದತೆ ಸಹಬಾಳ್ವೆ ಭ್ರಾತೃತ್ವ ಕೊಟ್ಟಿದೆ. ಪ್ರಜಾಪ್ರಭುತ್ವಕ್ಕೆ ಇಂದು ಗಂಡಾಂತರ ಬಂದಿದೆ. ಅದರಿಂದ ನಮಗೆ ತೊಂದರೆಯಾಗುತ್ತದೆ. ಸಂವಿಧಾನವನ್ನು ತಿರುಚುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ನಾವು ಸಾಮಾನ್ಯ ಜನಗಳು ಒಂದಾಗುವ ಅವಶ್ಯಕತೆ ಇದೆ’ ಎಂದರು.
ಕಾರ್ಯಕ್ರಮದಲ್ಲಿ ‘ಎದ್ದೇಳು ಕರ್ನಾಟಕ’ದ ಅಬ್ದುಲ್ ಖಾದಿರ್, ಅಕ್ರಮ್ ಮಾಶಾಳಕಾರ್, ಫಾದರ್ ಫ್ರಾನ್ಸಿಸ್, ಡಿವಿಪಿ ಜಿಲ್ಲಾ ಅಧ್ಯಕ್ಷ ಅಕ್ಷಯ್ ಕುಮಾರ್ ಇತರರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಗರದ ಹಲವು ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.