ಒಳಮೀಸಲಾತಿ, ಎ ಜೆ ಸದಾಶಿವ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ದಲಿತ ಸಮುದಾಯದ ಮುಖಂಡರು ಸೇರಿದಂತೆ ಒಳಮೀಸಲಾತಿಗೆ ಒಳಪಡುವ ಎಲ್ಲ ಜನಾಂಗದವರು ಒಗ್ಗೂಡಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಇತರ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಈ ಬೃಹತ್ ಮೆರವಣಿಗೆ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.
ದಲಿತ ಮುಖಂಡ ಡಿ ಬಿ ಮುದೂರ ಮಾತನಾಡಿ, “ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕಾಗಿದೆ. ಆದರೆ ಈವರೆಗೆ ಒಳಮೀಸಲಾತಿ ಅನುಷ್ಠಾನಕ್ಕೆ ತಂದಿಲ್ಲ. ಹಾಗಾಗಿ ಒಳಮೀಸಲಾತಿಗೆ ಒಳಪಡುವ ಎಲ್ಲ ಜನಾಂಗದವರೂ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಸರ್ಕಾಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದೇವೆ” ಎಂದರು.
“ಸತತ 30 ರಿಂದ 40 ವರ್ಷದಿಂದ ಈ ಹೋರಾಟ ನಡೆಯುತ್ತಲೇ ಇದೆ. ಜತೆಗೆ ಸರ್ವೋಚ್ಚ ನ್ಯಾಯಾಲಯ ಒಳಮೀಸಲಾತಿ ಜಾರಿಗೆ ಆದೇಶ ಹೊರಡಿಸಿದೆ. ಆದರೆ ಈವರೆಗೂ ಒಳಮೀಸಲಾತಿ ಜಾರಿ ಮಾಡಿಲ್ಲ. ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಈ ಹೋರಾಟ ಮುಂದುವರೆಸಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೊಲ್ಹಾರದ ಕಲ್ಲು ಗಣಿಗಾರಿಕೆ ಬಂದ್ ಮಾಡುವಂತೆ ರೈತರ ಆಗ್ರಹ
ಸಿ ಜಿ ವಿಜಯಕರ ಮಾತನಾಡಿ, “ಶೋಷಿತ ವರ್ಗದ ಜನರಿಗೆ ಸಮಾನತೆಯಲ್ಲಿ ಅನ್ಯಾಯವಾಗುತ್ತಿದೆ. ಸರಿಸಮಾನತೆ ಈ ಜನಾಂಗದವರಿಗೂ ಸಿಗಬೇಕು. ಹಿಂದುಳಿದ ವರ್ಗದವರಿಗೆ ನ್ಯಾಯ ಸಿಗಬೇಕು. ಒಳಮೀಸಲಾತಿ ಜಾರಿಯಾದರೆ ಇದೆಲ್ಲವೂ ದೊರಕುವ ಸಾಧ್ಯತೆಯಿದೆ” ಎಂದು ಸರ್ಕಾರಕ್ಕೆ ಒತ್ತಾಯಸಿದ್ದು, ಒಳಮೀಸಲಾತಿಯ ಮಹತ್ವದ ಬಗ್ಗೆ ತಿಳಿಸಿದರು.
ಮುಖಂಡರುಗಳಾದ ಹರೀಶ್ ನಾಟೀಕಾರ, ತಂಗಡಿಯವರಾದ ಶಾಂತಪ್ಪ ಪೂಜಾರಿ, ಡಿ ಬಿ ಮುದೂರ, ಸಿ ಜಿ ವಿಜಯಕರ್, ಬಾಲಚಂದ್ರ ಹುಲ್ಲೂರ, ಪರಶುರಾಮ ಕೂಚಬಾಳ, ಹುಲಗಪ್ಪ ನಾಗರಬೆಟ್ಟ, ಬಸವರಾಜ ನಾಗರಬೆಟ್ಟ, ಭೀಮಣ್ಣ ಲೋಟಗೇರಿ, ರವಿ ಬಸರಕೋಡ, ರವಿ ಗರಸಂಗಿ, ಬೈಲಪ್ಪ ಗರಸಂಗಿ, ರಾಘು ನಾಲತವಾಡ, ಶಿವು ನಾಲತವಾಡ, ನಾಗಪ್ಪ ಲೋಟಗೇರಿ, ಶೇಕು ಮಾದರ, ಪುರಸಭೆ ಸದಸ್ಯ ಶಿವು ಶಿವಪುರ, ಪ್ರಶಾಂತ ಕಾಳೆ, ಪ್ರಕಾಶ ಸರೂರ, ದೇವರಾಜ ಹಂಗರಗಿ, ಕಾಶೀನಾಥ್ ದೊಡ್ಡಮನಿ ಪೂಜಾರಿ ಸೇರಿದಂತೆ ಇತರ ದಲಿತ ಮುಖಂಡರು ಇದ್ದರು.