ನೇಹಾ ಹಿರೇಮಠ್ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದೆ.
ಈ ವೇಳೆ ತಾಲೂಕ ಅಧ್ಯಕ್ಷ ಕಾಶೀನಾಥ್ ತಾಳಿಕೋಟಿ ಮಾತನಾಡಿ, ನೇಹಾ ಹಿರೇಮಠ್ ಕೊಲೆಯು ಹುಬ್ಬಳ್ಳಿ ಜನತೆ ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ತುಂಬಾ ಆಘಾತ ಉಂಟು ಮಾಡಿದೆ. ಕೊಲೆ ಮಾಡಿದ ಫಯಾಜ್, ನೇಹಾಳಿಗೆ ಪ್ರೀತಿಸುವಂತೆ ಹಿಂದೆ ಬಿದ್ದು ಪೀಡಿಸುತ್ತಿದ್ದ. ಆತನ ಪ್ರೀತಿ ನಿರಾಕರಿಸಿದ ನೇಹಾ ಮೇಲೆ ಕೋಪಗೊಂಡ ಫಯಾಜ್ ಕ್ಯಾಂಪಸ್ ಒಳಗಡೆ ನುಗ್ಗಿ, ಚಾಕುವಿನಿಂದ ಚುಚ್ಚಿ ಬರ್ಬರ ವಾಗಿ ಹತ್ಯೆ ಮಾಡಿದ್ದು, ಆ ಕೃತ್ಯ ದಿಂದ ರಾಜ್ಯದೆಲ್ಲಡೆ ಪಾಲಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಲಿಸಲು ಭಯಭೀತಾರಾಗಿದ್ದಾರೆ ಎಂದರು.
ಆದ ಕಾರಣ ನಾವೆಲ್ಲರೂ ತೀವ್ರ ವಾಗಿ ಖಂಡಿಸುತ್ತೇವೆ. ಸರ್ಕಾರ ಇದನ್ನು ಗಂಭೀರವಾಗಿ ತಗೆದುಕೊಂಡು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ದೇಶಾದ್ಯಂತ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಸುಲಿಗೆಯಂತಹ ಅಮಾನವೀಯಕರ ಕೃತ್ಯಗಳು ದಿನ ಕಳೆದಂತೆ ಹೆಚ್ಚಾಗುತ್ತಲೇ ಇವೆ. ಕಾರಣ ಮಹಿಳೆಯರ ರಕ್ಷಣೆಗೆ ವಿಶೇಷ ಕಾನೂನು ಜಾರಿಯಾಗಬೇಕು ಹಾಗೂ ಎಲ್ಲ ಶಾಲಾ ಕಾಲೇಜು ಮತ್ತು ಎಲ್ಲಾ ವಿದ್ಯಾ ಕೇಂದ್ರ ಗಳಲ್ಲಿ ಮಹಿಳೆಯರಿಗೆ ವಿಶೇಷ ಭದ್ರತೆ ನೀಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಅಂಬರೀಶ ದುರ್ಗಿ ಮುರ್ಗಿ, ಪರಶುರಾಮ ನಾಟೇಕರ, ಶಶಿಕಾಂತ ಕಂದೊಳ್ಳಿ ಇತರರು ಉಪಸ್ಥಿತರಿದ್ದರು.
