ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ರಾಜ್ಯ ಸರ್ಕಾರದ ಸಚಿವಾಲಯ ಕ್ಲಬ್ ಆವರಣದಲ್ಲಿ ಫೆಬ್ರವರಿ 18ರಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಡಾ. ಬಿ ಆರ್ ಅಂಬೇಡ್ಕರ್ ಕುರಿತ ಸ್ಪರ್ಧಾತ್ಮಕ ಪರೀಕ್ಷೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಈ ಬಗ್ಗೆ ವಿವರ ನೀಡಿದರು.
“ವಿದ್ಯಾರ್ಥಿ, ಯುವಜನರ ಹಕ್ಕುಗಳಿಗಾಗಿ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯಮಟ್ಟದ ಸಮ್ಮೇಳನ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಫೆಬ್ರವರಿ 18ರಂದು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ನಾಡಿನ ಗಣ್ಯ ವ್ಯಕ್ತಿಗಳು, ಸಾಹಿತಿಗಳು, ಲೇಖಕರು, ಚಿಂತಕರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದರು.
“ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಕುರಿತು ರಾಜ್ಯಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸುತ್ತಾ ಬಂದಿದೆ. ಕಳೆದ ವರ್ಷವೂ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಭಾಗವಹಿಸಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಕೊಡಲಾಗುತ್ತದೆ” ಎಂದು ಅವರು ತಿಳಿಸಿದರು.
“ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ಬಹುಮಾನ ₹2.50 ಲಕ್ಷ, ತೃತೀಯ ಬಹುಮಾನ ₹1 ಲಕ್ಷ ಮತ್ತು ಪ್ರತಿ ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ಬಂದವರಿಗೆ ₹15,000 ಬಹುಮಾನವನ್ನು ಪರಿಷತ್ತಿನಿಂದ ಕೊಡಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಉತ್ತಮ ಭವಿಷ್ಯಕ್ಕಾಗಿ ವೃತ್ತಿಪರ ಕೌಶ್ಯಲಗಳ ಅಭಿವೃದ್ಧಿ ಅವಶ್ಯಕ: ಬಸವರಾಜ ಬೆಣ್ಣೆ
ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಮಟ್ಟದ 15ನೇ ಸಮ್ಮೇಳನ ಕೂಡ ನಡೆಯುತ್ತಿದೆ. ಈ ಸಮ್ಮೇಳನದ ಉದ್ಘಾಟಕರಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸಲಿದ್ದಾರೆ” ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಸತೀಶ್ ಅಂಜುಟಗಿ, ಮಾದೇಶ್ ಛಲವಾದಿ, ಯುವರಾಜ್, ಪ್ರಜ್ವಲ್, ಸಯ್ಯದ, ವಿಜಯ, ಈಶ್ವರ್, ದತ್ತು ಸೇರಿದಂತೆ ಇತರರು ಉಪಸ್ಥಿತರಿದ್ದರು.