ಬಿಜೆಪಿ ನಾಯಕರು ಛಲವಾದಿ ನಾರಾಯಣಸ್ವಾಮಿ, ರವಿಕುಮಾರ ಅವರನ್ನು ಮುಂದಿಟ್ಟುಕೊಂಡು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಕೀಳುಮಟ್ಟದ ಭಾಷೆಯ ಮೂಲಕ ಹಿಂದುಳಿದ ಸಮುದಾಯಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿ ದಸಂಸ (ಡಿ.ಜಿ.ಸಾಗರ ಬಣ) ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ವಿಧಾನ ಪರಿಷತ್ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, “ರಾಜ್ಯ ರಾಜಕಾರಣದಲ್ಲಿ ಸಂವಿಧಾನ ಬದ್ಧ ಆಡಳಿತ ನಡೆಸಿ ಹಿಂದುಳಿದ, ದಲಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ತುಳಿಯುವ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ದಲಿತ ನಾಯಕರನ್ನೇ ಬಳಸಿಕೊಂಡು ಇಲ್ಲಸಲ್ಲದ ಆರೋಪ, ಅವಹೇಳನಗಳನ್ನು ಮಾಡುತ್ತಿದ್ದು, ಅಧಿಕಾರದ ಆಸೆಗಾಗಿ ಕಿಳುಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಇತ್ತೀಚಿಗೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಡೆದ ಪ್ರತಿಭಟನೆ ರ್ಯಾಲಿಯಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳು ಪಾಕಿಸ್ತಾನದಿಂದ ಬಂದವರಂತೆ ಕಾಣುತ್ತದೆಂದು ಅಗೌರವದಿಂದ ಅಸಂವಿಧಾನ ಪದವನ್ನು ಬಳಿಸಿದ್ದರು. ಈ ಮೂಲಕ ಜನರ ಹಾಗೂ ಐ.ಎ.ಎಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿಕೆಯನ್ನು ನಾಗರಿಕ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಕಲಬುರಗಿ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ಪ್ರಕರಣದಲ್ಲಿ ಕ್ಷಮೆ ಯಾಚಿಸುವಂತೆ ಹೈಕೋರ್ಟ್ ತಾಕೀತು ಮಾಡಿದೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಇಂಥ ನಡವಳಿಕೆ ಸರಿಯಲ್ಲ, ಈ ಕೂಡಲೇ ಇವರನ್ನು ಎಂ.ಎಲ್.ಸಿ ಸ್ಥಾನದಿಂದ ವಜಾಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಪುಂಡರ ತಾಣವಾದ ಡಿ.ದೇವರಾಜ ಅರಸು ಭವನ; ಕ್ರಮ ಕೈಗೊಳ್ಳುವರೇ ಅಧಿಕಾರಿಗಳು?
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಚಾಲಕ ರಮೇಶ ದರಣಾಕರ, ದಲಿತ ಮುಖಂಡ ಮಹಾಂತೇಶ ಸಾಸಬಾಳ, ವಿಜಯಕುಮಾರ ಕಾಂಬಳೆ, ರಾಜಕುಮಾರ ಕಳ್ಳಿಮನಿ, ಅರುಣ ಗವಾರಿ, ರಾಜು ಕಾಂಬಳೆ, ಶೇಖರ ಮಲಕಣ್ಣವರ, ಪ್ರಶಾಂತ ಝಂಡೆ, ಬಾಬು ಗುಡಮಿ, ಶಿವು ಮಸಳಿಕೇರಿ, ರಮೇಶ ನಿಂಬಾಳಕರ, ಧರೆಪ್ಪ ಮಂದೊಲಿ, ವಿಶ್ವನಾಥ ದೊಡಮನಿ ಸೇರಿದಂತೆ ಮತ್ತಿತರರು ಇದ್ದರು.