ವಿಜಯಪುರ ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ಹೆಸರಲ್ಲಿ ಪೋಷಕರಿಂದ ವಿಪರೀತ ಹಣ ವಸೂಲಿ ಮಾಡುತ್ತಿದ್ದಾರೆ. ಖಾಸಗಿಯವರ ಈ ನೀತಿಗಳಿಗೆ ಕಡಿವಾಣ ಹಾಕಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಅಕ್ಷಯ ಕುಮಾರ ಅಜಮನಿ ಮಾತನಾಡಿ, “ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಪಿಯುಸಿ ಸೇರಿ ಉನ್ನತ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಡೊನೇಷನ್ ಹೆಸರಿನಲ್ಲಿ ಅತಿ ಹೆಚ್ಚು ಹಣ ವಸೂಲಿ ಮಾಡುತ್ತಿರುವುದು ಅತ್ಯಂತ ಖಂಡನೀಯ. ಎಲ್ಲಾ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಿಯುಸಿ ದಾಖಲಾತಿಯೊಂದಕ್ಕೆ ಸುಮಾರು 2 ರಿಂದ 3 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸಾಮಾನ್ಯ ಜನವರ್ಗ ಮಕ್ಕಳಿಗೆ ದುಬಾರಿ ಶಿಕ್ಷಣ ನೀಡಲು ಸಾಧ್ಯವಾಗದೆ ಹಣಕ್ಕಾಗಿ ಸಾಲದ ಮೊರೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಮತ್ತು ಪಾಲಕರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ಅದನ್ನ ಸರಿಪಡುವ ನಿಟ್ಟಿನಲ್ಲಿ ಯಾಕೆ ಕ್ರಮಗಳಾಗುತ್ತಿಲ್ಲ. ಇದು ಇದೇ ರೀತಿ ಮುಂದುವರೆದರೆ ಖಾಸಗಿ ಸಂಸ್ಥೆಗಳ ವಿರುದ್ಧ ಹೋರಾಟ ಮುಂದುವರೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಸಂಬಂಧಪಟ್ಟ ಅಧಿಕಾರಿಗಳು ಇಂದೇ ಆದೇಶ ಹೊರಡಿಸಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳು ರೋಸ್ಟರ್ ಪ್ರಕಾರವೇ ಫೀ ತೆಗೆದುಕೊಳ್ಳಬೇಕು, ಸರ್ಕಾರದ ಆದೇಶದ ರೋಸ್ಟರ್ ನ್ನು ಕಡ್ಡಾಯವಾಗಿ ದೊಡ್ಡ ಪ್ರಮಾಣದಲ್ಲಿ ಪ್ರಸ್ತುತ ಪಡಿಸಬೇಕು. ರೋಸ್ಟರ್‌ನಲ್ಲಿ ಇರುವ ನಿಯಮಾವಳಿಯಂತೆ ಶಿಕ್ಷಕರನ್ನ ನೇಮಕ ಮಾಡಿಕೊಳ್ಳಬೇಕು, ಕಡ್ಡಾಯವಾಗಿ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಿ ಎಸ್ ಟಿ ಟಿನ್ ನಂಬರ್ ಇರುವ ರಸಿದಿಯನ್ನೇ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಪಹಲ್ಗಾಮ್ ಉಗ್ರ ದಾಳಿಗೆ ಬಲಿಯಾದವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಈ ಸಂದರ್ಭದಲ್ಲಿ ಮಾದೇಶ್ ಚಲವಾದಿ, ಸಂದೇಶ್ ಕುಮುಟಗಿ, ಯುವರಾಜ್ ಓಲೇಕಾರ, ಆದಿತ್ಯ, ಪ್ರಶಾಂತ್ ದಾಂಡೇಕರ್, ಶಂಕರ್ ಬಸರಗಿ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು.