ಕರ್ತವ್ಯಲೋಪ ಆರೋಪದ ಮೇಲೆ ವಿಜಯಪುರ ಡಿಡಿಪಿಐ ಎನ್.ಎಚ್ ನಾಗೂರು ಅವರನ್ನು ಮತ್ತೆ ಅಮಾನತು ಮಾಡಲಾಗಿದೆ. ಒಂದೇ ವರ್ಷದಲ್ಲಿ ಸತತ ಮೂರನೇ ಬಾರಿಗೆ ಅಮಾನತಾಗುವ ಮೂಲಕ ಹ್ಯಾಟ್ರಿಕ್ ಸಾಧನೆಯ ಕುಖ್ಯಾತಿ ಪಡೆದಿದ್ದಾರೆ.
2024-25ರ ಶೈಕ್ಷಣಿಕ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ಹೊಸ ಶಾಲೆಗಳ ನೋಂದಣಿಯಲ್ಲಿ ನಿಯಮಬಾಹಿರವಾಗಿ ಅನುಮೋದನೆ ನೀಡಿದ್ದಾ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಾಗೂರು ವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಆದೇಶಿಸಿದ್ದಾರೆ.
EDSS ಯೋಜನೆಗಳ ಅನುಷ್ಠಾನದಲ್ಲಿ ಕರ್ತವ್ಯಲೋಕ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಎನ್.ಎಚ್ ನಾಗೂರು ಹಾಗೂ ಇಬ್ಬರು ಉಪನ್ಯಾಸಕರನ್ನು 2024ರ ಜನವರಿ 30 ರಂದು ಮೊದಲ ಬಾರಿಗೆ ಅಮಾನತು ಮಾಡಲಾಗಿತ್ತು.
ಅದಾದ ಬಳಿಕ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲಿ ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿಲ್ಲ. ಪರೀಕ್ಷಾರ್ಥಿಗಳನ್ನು ತಪಾಸಣೆ ಮಾಡದೆ ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಜನ ಸಮೂಹವನ್ನು ನಿಯಂತ್ರಿಸುವಲ್ಲಿಯೂ ವಿಫಲರಾಗಿದ್ದಾರೆ ಎಂಬ ಆರೋಪದಲ್ಲಿ 2024 ಎಪ್ರಿಲ್ 16ರಂದು ಎರಡನೇ ಬಾರಿಗೆ ಅಮಾನತು ಮಾಡಲಾಗಿತ್ತು.
ಇದೀಗ ಮೂರನೇ ಬಾರಿಗೆ, ಹೊಸ ಶಾಲೆಗಳ ನೋಂದಣಿಯಲ್ಲಿ ವಿಚಾರದಲ್ಲಿ ನಿಮಯಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತಾಗಿದ್ದಾರೆ.