ಲಿಂಗಾಯತ ಸಮಾಜಕ್ಕೆ ಪ್ರವರ್ಗ 2ಎ ಲಿಂಗಾಯತ ಉಪ ಸಮಾಜಗಳಿಗೆ ಒಬಿಸಿ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ರೂಪಿಸುವ ಸಂಬಂಧ ಚರ್ಚಿಸಲು ಬೆಳಗಾವಿ ಗಾಂಧಿ ಭವನದಲ್ಲಿ ಸೆಪ್ಟೆಂಬರ್ 22ರ ಬೆಳಿಗ್ಗೆ 10ಕ್ಕೆ ವಕೀಲರ ಸಮಾವೇಶ ಸಂಘಟಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಂದಿ ವಕೀಲರು ಪಾಲ್ಗೊಂಡು ಮೀಸಲಾತಿ ಪಡೆಯಲು ಮುಂದೆ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.
“ಪಂಚಮಸಾಲಿ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ, ಪ್ರತಿಭಾನ್ವಿತರ ಅವಕಾಶಕ್ಕಾಗಿ ಪ್ರವರ್ಗ 2ಎ ಮೀಸಲಾತಿ ಕಲ್ಪಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಈ ಬಗ್ಗೆ ಸುದೀರ್ಘ ಹೋರಾಟ ನಡೆಸಲಾಗುತ್ತಿದೆ” ಎಂದರು.
“ಪಂಚಮಸಾಲಿ ಮಕ್ಕಳ ಭವಿಷ್ಯಕ್ಕಾಗಿ ಪ್ರತಿಭಾನ್ವಿತರ ಅವಕಾಶಕ್ಕಾಗಿ ಪ್ರವರ್ಗ 2ಎ ಪಾದಯಾತ್ರೆ, ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆಯ ಗಮನ ಸೆಳೆಯುವುದು ಸೇರಿದಂತೆ ವಿವಿಧ ಹೋರಾಟಗಳನ್ನು ಕೈಗೊಳ್ಳಲಾಗಿತ್ತು. ಸಮುದಾಯದ ಶಾಸಕರು ಈ ಬಗ್ಗೆ ಧ್ವನಿ ಎತ್ತಲು ಸಭಾಧ್ಯಕ್ಷರಿಗೆ ಅವಕಾಶ ಕೋರಿದರೂ ಅವಕಾಶ ದೊರಕಲಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊರತುಪಡಿಸಿ ಉಳಿದ ಶಾಸಕರು ಈ ಬಗ್ಗೆ ಪ್ರಬಲವಾಗಿ ಧ್ವನಿ ಎತ್ತಲಿಲ್ಲ. ನಮ್ಮ ಸಮುದಾಯದ ಶಾಸಕರು ಇನ್ನೂ ಪ್ರಬಲ ಹಾಗೂ ಪರಿಣಾಮಕಾರಿಯಾದ ಧ್ವನಿ ಮೊಳಗಿಸಬಹುದಿತ್ತು. ಕಾನೂನಾತ್ಮಕ ಹೋರಾಟದ ಮೂಲಕ ಹಕ್ಕನ್ನು ಪಡೆದುಕೊಳ್ಳಲು ತೀರ್ಮಾ ಕೈಗೊಳ್ಳಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಹೋರಾಟಗಾರರ ಶ್ರಮವಿದೆ: ತಹಶೀಲ್ದಾರ್ ನಾಗಯ್ಯ ಹಿರೇಮಠ
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ ಎಂ ಪಾಟಿಲ, ಈರಣ್ಣ ಚಾಗಶೆಟ್ಟಿ, ವಕೀಲರಾದ ಶ್ರೀಶೈಲ್ ಮುಳಜಿ, ಬಿ ಎಂ ಪೊಲೀಸ್ ಪಾಟೀಲ್, ಜಿಲ್ಲಾ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ನಿಂಗನಗೌಡ ಸೊಲ್ಲಾಪುರ, ನಗರ ಘಟಕದ ಅಧ್ಯಕ್ಷ ಶ್ರೀಶೈಲ್ ಬುಕ್ಕಣ್ಣಿ, ಜಿಲ್ಲಾ ಮಾಧ್ಯಮ ವಕ್ತಾರ ದಾನೇಶ್ ಅವಟಿ ಇದ್ದರು.
