ಚಿಮ್ಮಲಗಿ ಏತ ನೀರಾವರಿ ಯೋಜನೆಯ ಅಮರೇಶ್ವರ ದೇವಸ್ಥಾನದ ಬಳಿ ಮುಖ್ಯರಸ್ತೆ ತಿರುವಿನಲ್ಲಿ ಸೇತುವೆ ಹಾಗೂ ಕಾಲುವೆ ಕಾಮಗಾರಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಯುವಜನ ಸೇನೆಯ ರಾಜ್ಯ ಘಟಕದಿಂದ ನಡೆಸುತ್ತಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮಣಿದ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟಿದ್ದಾರೆ.
ಶಿವಾನಂದ್ ವಾಲಿ ನೇತತ್ವದಲ್ಲಿ ಕಳೆದ ಮೂರು ದಿನಗಳಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ನಲತಾವಾಡದಲ್ಲಿ ರೈತರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು.
ಕೆಬಿಜೆಎನ್ಎಲ್ ಅಧಿಕಾರಿಗಳು ನಿರಂತರವಾಗಿ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು. ಆದರೂ ಸಫಲರಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಭೂಸ್ವಾಧೀನಾಧಿಕಾರಿಗಳು ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳು ಜಂಟಿಯಾಗಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಅಮರೇಶ್ವರ ದೇವಸ್ಥಾನದ ಹತ್ತಿರ ಬಾಕಿ ಉಳಿದಿರುವ ಕಾಮಗಾರಿ ಪ್ರಾರಂಭಿಸಲು ಎಷ್ಟು ಕಾಲಾವಕಾಶ ಬೇಕು ಮತ್ತು ಜಮೀನು ಕಳೆದುಕೊಂಡ ರೈತರಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಪ್ರಥಮ ಆದ್ಯತೆ ನೀಡಬೇಕು. ಒಂದು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆಯಿಂದ ಉಳಿದ ರೈತರಿಗೆ ಕೂಡಲೇ ಆರ್ಡರ್ ಕಾಪಿ ನೀಡಬೇಕೆಂದು ರೈತರು ಬಿಗಿಪಟ್ಟು ಹಿಡಿದ ಕಾರಣ ಅಧಿಕಾರಿಗಳು ಎಲ್ಲ ಶರತ್ತುಗಳನ್ನು ಒಪ್ಪಿ ಲಿಖಿತವಾಗಿ ಭರವಸೆ ನೀಡಿದ್ದಾರೆ.
ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಿದಾಗ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರ್ ನಾಡಗೌಡ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸದಸ್ಯ ಪೃಥ್ವಿರಾಜ್ ನಾಡಗೌಡ, ಗುರುಪ್ರಸಾದ್ ದೇಶಮುಖ್, ಸಿ ಬಿ ಅಸ್ಕಿ, ವೈ ಎಚ್ ವಿಜಯಕರ, ಅಪ್ಪು ದಣಿ ದೇಶಮುಖ, ಚಂದ್ರಶೇಖರ್ ಗಂಗನಗೌಡರ, ಸಿದ್ದಣ್ಣ ಆಲಕೊಪ್ಪರ, ಮಲ್ಲು ತಳವಾರ, ಹನುಮಂತ ಕುರಿ ನೇತೃತ್ವದಲ್ಲಿ ಹೋರಾಟ ಅಂತ್ಯಗೊಳಿಸಲಾಯಿತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿಯೂ ಸಮಾಜಕ್ಕೆ ಮುಖ್ಯ: ಡಾ ಬಾಬು ಸಜ್ಜನ
ಮುಖಂಡರಾದ ಜಿ ಮಹಾಂತಗೌಡ ಗಂಗನಗೌಡರ, ಬಾಬು ಆದಿಮನಿ, ರಫೀಕ್ ತಗ್ಗಿನಮನಿ, ಮಹಾಂತಯ್ಯ ಮನೆದಾಳಮಠ, ಸಂಗು ಗಂಗನಗೌಡರ, ಮಲ್ಲು ಗಂಗನವಿಜಯಗೌಡರ, ಶರಣಪ್ಪ ಗಂಗನಗೌಡರ, ಚೆನ್ನಪ್ಪ ಗೌಡ ಹಂಪನಗೌಡರ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಸೇರಿದಂತೆ ಬಹುತೇಕರು ಇದ್ದರು.
