ವಿಜಯಪುರ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಹೋರಾಟ ಮುಂದುವರೆದಿದೆ.
ಜಿಲ್ಲೆಯ ಕೇವಲ ಮೂರು ತಾಲೂಕುಗಳನ್ನು ಪೂರ್ಣ ಬರಗಾಲ ಹಾಗೂ ಇನ್ನು ಮೂರು ತಾಲೂಕುಗಳನ್ನು ಮಧ್ಯಮ ಬರಗಾಲ ಎಂದು ಪರಿಗಣಿಸಿ, ಉಳಿದ ತಾಲೂಕುಗಳನ್ನು ಬರಗಾಲ ಘೋಷಣೆಯಿಂದ ಕೈಬಿಟ್ಟಿರುವುದು ಖಂಡನೀಯ. ಕೂಡಲೇ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ರಾಜ್ಯ ಮುಖಂಡ ಪ್ರಕಾಶ ಚವ್ಹಾಣ ಮಾತನಾಡಿ, “ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಕೇವಲ ಮೂರು ತಾಲೂಕುಗಳನ್ನು ಬರಗಾಲ ಎಂದು ಘೋಷಿಸಿ, ಉಳಿದ ತಾಲೂಕುಗಳನ್ನು ಕೈಬಿಟ್ಟಿರುವುದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉಳಿದ ತಾಲೂಕುಗಳನ್ನೂ ಬರಗಾಲ ಎಂದು ಘೋಷಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಈ ಹೋರಾಟಕ್ಕೆ ಬಂಜಾರ ಸಮುದಾಯದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು” ಎಂದರು.
ನಿಡಗುಂದಿಯ ಹಿರಿಯ ರೈತ ಹೋರಾಟಗಾರ ಸಾಬಣ್ಣ ಅಂಗಡಿ ಮಾತನಾಡಿ, “ಜಿಲ್ಲೆಯನ್ನು ಕೂಡಲೇ ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಇದರಿಂದ ಜನಸಾಮಾನ್ಯರಿಗೂ ತೊಂದರೆಯಾಗಲಿದೆ. ಸರ್ಕಾರ ಇದನ್ನು ಅರಿತು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ರೈತರೊಂದಿಗೆ ಹೋರಾಟಕ್ಕೆ ಬರಬೇಕು” ಎಂದು ಒತ್ತಾಯಿಸಿದರು.
- ರೈತರ ಪ್ರಮುಖ ಬೇಡಿಕೆಗಳು
- ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು.
- ಬೆಳೆ ವಿಮೆ ಪಾವತಿಸಿರುವ ರೈತರಿಗೆ ಶೇ 50ರಷ್ಟು ಮಧ್ಯಂತರ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ನೀರಿನಿಂದ ಭರ್ತಿ ಮಾಡಬೇಕು.
- ಜಿಲ್ಲೆಯ ಎಲ್ಲ ದನಕರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವಿನ ವ್ಯವಸ್ಥೆ ಮಾಡಬೇಕು.
- ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು.
ಹೋರಾಟದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಮಹದೇವ ಬನಸೋಡೆ, ಗೋಪಾಲ ಮಹಾರಾಜರು, ದಯಾನಂದ ಕಸಮೋಳೆ, ಸವಾಳೇ, ಸಂಗಪ್ಪ ಟಕ್ಕೆ, ವಿನಯ ರೆಡ್ಡಿ, ಗುರನಗೌಡ ಬಿರಾದಾರ, ಬಸಪ್ಪ ಕುಂಬಾರ, ಸಿದ್ದಪ್ಪ ಕೋಟ್ಯಾಳ, ಸದಾಶಿವ ಬೂದಿಹಾಳ, ಅಶೋಕ್ ಕೋಟ್ಯಾಳ, ಅರ್ಜುನ್ ಹಾವಗೊಂಡ, ವಿಠ್ಠಲ್ ಗೌರವಗೊಳ, ಮಲ್ಲು ಭೂದಿಹಾಳ, ಪ್ರಕಾಶ ಬಿರಾದಾರ, ಲಕ್ಷ್ಮಣ ಕಜ್ಜಿಡೋಣಿ, ಶಂಕರ ಹಾಲಳ್ಳಿ, ಸತೀಶ ದಾಸ್ಯಾಳ, ಮಹಾಂತೇಶ ಬಿರಾದಾರ, ಅಪ್ಪಸಾಹೇಬ ಯರನಾಳ, ಭೀಮಣ್ಣ ಭಾಗಲಕೋಟ, ಮಾದೇವ ಸನಾಳ ಸೇರಿದಂತೆ ಮತ್ತಿತರರು ಇದ್ದರು.





