ಜಾತಿ ತಾರತಮ್ಯದಿಂದ ಅವಮಾನಕ್ಕೊಳಗಾಗಿದ್ದೇನೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದ 37 ವರ್ಷದ ದಲಿತ ಮಹಿಳಾ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೆಲೂರು ಸಮೀಪದ ಕಂಬೂರ್‌ನಲ್ಲಿ ನಡೆದಿದೆ.
ಕಂಬೂರ್ ಪಂಚಾಯಿತಿಯಲ್ಲಿ ಕಳೆದ ಎಂಟು ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಶಶಿಕಲಾ ಅವರು ಭಾನುವಾರ ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಪಂಚಾಯಿತಿ ಕಾರ್ಯದರ್ಶಿಯಿಂದ ಜಾತಿ ಆಧಾರಿತ ತಾರತಮ್ಯ ಮತ್ತು ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಈ ಹಿಂದೆ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರಿಗೆ ದೂರು ಸಲ್ಲಿಸಿದ್ದರು.
ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಶಶಿಕಲಾ ಅವರು ತಮ್ಮ ಮನೆಯ ಹೊರಗೆ ವಾಂತಿ ಮಾಡುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅವರನ್ನು ಮೆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಕೀಟನಾಶಕ ಸೇವಿಸಿರುವುದು ಪತ್ತೆಯಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಶಶಿಕಲಾ ಅವರ ಪತಿ ಟಿ ಪ್ರಕಾಶ್ ಅವರು ಪಂಚಾಯಿತಿ ಕಾರ್ಯದರ್ಶಿ ರೂಪಾ ಅವರು ದಲಿತ ಪೌರಕಾರ್ಮಿಕರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದಲಿತ ಕಾರ್ಮಿಕರಿಗೆ ಚಹಾ ಕುಡಿಯಲು ಪಂಚಾಯಿತಿಯಲ್ಲಿ ಸಾಮಾನ್ಯ ಲೋಹದ ಲೋಟಗಳನ್ನು ಬಳಸಲು ಅವಕಾಶ ನೀಡದೆ, ಪ್ರತ್ಯೇಕ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸುವಂತೆ ಬಲವಂತ ಮಾಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಕಾರ್ಮಿಕರು ಈ ಪದ್ಧತಿಗೆ ಆಕ್ಷೇಪ ವ್ಯಕ್ತಪಡಿಸಿದರೂ ಅದು ಮುಂದುವರಿದಿತ್ತು ಎಂದು ತಿಳಿಸಿದ್ದಾರೆ.
ಇದಲ್ಲದೆ, ಜಾತಿಯ ಆಧಾರದ ಮೇಲೆ ಕೆಲಸ ಹಂಚಿಕೆ ಮಾಡಲಾಗುತ್ತಿತ್ತು ಮತ್ತು ಅವಹೇಳನಕಾರಿ ಮಾತುಗಳನ್ನು ಆಡಲಾಗುತ್ತಿತ್ತು ಎಂದು ಪ್ರಕಾಶ್ ಆರೋಪಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ತಮ್ಮ ಪತ್ನಿಗೆ ಪಂಚಾಯಿತಿ ಕಾರ್ಯದರ್ಶಿಯ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಂತೆ ಹೇಳಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ವಿರುದ್ಧ ದಲಿತರ ಪ್ರತಿಭಟನೆ
ಪಂಚಾಯಿತಿಯ ಕಾರ್ಯನಿರ್ವಹಣೆ ಕುರಿತು ಶಶಿಕಲಾ ಅವರು ದೂರು ನೀಡಿದ ಬಳಿಕ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದು ಪ್ರಕಾಶ್ ಆರೋಪಿಸಿದ್ದಾರೆ. ತಮ್ಮ ಪತ್ನಿ ಪೊಲೀಸ್ ದೂರು ಹಿಂಪಡೆಯುವಂತೆ ರೂಪಾ ಅವರ ಸಹಚರರು ಪದೇಪದೆ ಬೆದರಿಕೆ ಹಾಕುತ್ತಿದ್ದರು ಎಂದು ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗೆ ಸಲ್ಲಿಸಿದ್ದ ಮನವಿಯಲ್ಲಿ ಶಶಿಕಲಾ ಅವರು ಈ ಹಿಂದೆ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದರು. ತಮ್ಮ ದೂರಿಗೆ ಬೆಂಬಲ ನೀಡಿದ್ದ ಮತ್ತೊಬ್ಬ ಕಾರ್ಮಿಕರಿಗೂ ಬೆದರಿಕೆ ಹಾಕಿ ಗುರಿಯಾಗಿಸಲಾಗಿತ್ತು ಎಂದು ಅವರು ತಿಳಿಸಿದ್ದರು.
ತಮ್ಮ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿ, ಪಂಚಾಯಿತಿ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಶಿಕಲಾ ಮನವಿ ಮಾಡಿದ್ದರು. ಈ ಸಂಬಂಧ ಕಿಟ್ಟಂಪಟ್ಟಿ ಪೊಲೀಸರು ಸೆಪ್ಟೆಂಬರ್ 4ರಂದು ಭಾರತೀಯ ನ್ಯಾಯ ಸಂಹಿತೆಯ ಅಶ್ಲೀಲ ಕೃತ್ಯ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ (BNS) ಸೆಕ್ಷನ್ 296(b) ಮತ್ತು 351(2) ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ. ಪ್ರಕರಣದ ತನಿಖೆಯನ್ನು ಮೆಲೂರು ಡಿವೈಎಸ್‌ಪಿ ಶಿವಕುಮಾರ್ ಕೈಗೆತ್ತಿಕೊಂಡಿದ್ದಾರೆ.






