ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಇಂಗಳಗಿ-ಚಟ್ಟರಕಿ ಗ್ರಾಮಗಳಿಗೆ ಓಡಾಡಲು ಹಾಗೂ ಜಮೀನುಗಳಿಗೆ ತೆರಳಲು ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಆಗ್ರಹಿಸಿ ಇಂಗಳಗಿ ಗ್ರಾಮಸ್ಥರು ತಹಶೀಲ್ದಾರ್ ಪ್ರಕಾಶ ಸಿಂದಗಿಯವರಿಗೆ ಮನವಿ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ರೈತರು “ತಮ್ಮ ಗ್ರಾಮದಿಂದ ಚಟ್ಟರಕಿಗೆ ತೆರಳಲು ಹಾಗೂ ಸುಮಾರು 150 ಜಮೀನುಗಳಿಗೆ ತರಳಲು ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುನಃ ದೊರಕಿಸಿಕೊಡಬೇಕು” ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ್ ತಳಕೇರಿ ಮಾತನಾಡಿ, “ತಾಲೂಕಿನಲ್ಲಿ ರೈತರೇ ರೈತರಿಗೆ ಸಹಕಾರ ನೀಡುತ್ತಿಲ್ಲ. ಈಗ ಇಂಗಳಗಿ ಗ್ರಾಮದ ರೈತರೊಬ್ಬರು ತಮ್ಮ ಜಮೀನುಗಳ ಮೂಲಕ ತೆರಳುವ ರಸ್ತೆಯನ್ನು ಬಂದ್ ಮಾಡಿ ಯಾರೂ ತೆರಳದಂತೆ ಮಾಡಿದ್ದಾರೆ” ಎಂದು ಹೇಳಿದರು.
”ಈ ರಸ್ತೆ ಸಾಕಷ್ಟು ವರ್ಷಗಳಿಂದ ಬಳಕೆಯಲ್ಲಿದ್ದು, ಗ್ರಾಮದ ಬಹುತೇಕರು ತಮ್ಮ ಜಮೀನುಗಳಿಗೆ ತೆರಳಲು ಇದೇ ರಸ್ತೆಯನ್ನು ಬಳಕೆ ಮಾಡುತ್ತಿದ್ದರು. ಈಗ ಏಕಾಏಕಿ ರಸ್ತೆ ಬಂದ್ ಮಾಡಿ ಇಲ್ಲಿ ರಸ್ತೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನು ಗ್ರಾಮದ ನಕಾಶೆಯಲ್ಲಿಯೂ ಈ ರಸ್ತೆಯನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ರಸ್ತೆ ಇಲ್ಲವೆಂದರೆ ಹೇಗೆ? ಆದ್ದರಿಂದ ತಾವುಗಳೇ ಖುದ್ದಾಗಿ ಸ್ಥಳ, ನಕಾಶೆ ಪರಿಶೀಲನೆ ಮಾಡಿ ರಸ್ತೆ ದೊರಕಿಸಿಕೊಡಬೇಕು” ಎಂದು ತಹಶೀಲ್ದಾರರಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮೂಢ ಸಂಪ್ರದಾಯ ತಡೆಗೆ ದಲಿತ ಪ್ಯಾಂಥರ್ ಸಂಘಟನೆ ಆಗ್ರಹ
”ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜಮೀನುಗಳ ರಸ್ತೆ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೆಲವು ರೈತರ ಅಸಹಕಾರ ನೀತಿಗಳಿಂದ ನ್ಯಾಯಾಲಯಗಳ ಮೆಟ್ಟಿಲೇರುತ್ತಿವೆ. ಒಂದಡೆ ಮುಖ್ಯಮಂತ್ರಿಗಳು ಇದರ ಜವಾಬ್ದಾರಿಯನ್ನು ಆಯಾ ತಾಲೂಕಿನ ತಹಶೀಲ್ದಾರರಿಗೆ ನೀಡಿದ್ದರೂ ಕೂಡಾ ಪ್ರಕರಣ ಬಗೆಹರಿಯುತ್ತಿಲ್ಲ” ಎಂದರು.
ಗ್ರಾಮದ ರೈತರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ಯಮನೋರಿ ಸತಿಹಾಳ, ಆನಂದ ಕೊಣ್ಣೋರು, ಚನ್ನಬಸಪ್ಪ ಬಿರಾದಾರ, ರವಿ ಮಂಗಳೂರು, ಕಲ್ಲು ರಾವುರ್, ಶ್ರೀಶೈಲ್ ಸಾತಿಹಾಳ, ಸಿದ್ದನಗೌಡ ಗೊಡ್ಯಾಳ, ಬಸವರಾಜ ಬಿರಾದಾರ, ಬಸಪ್ಪ ಹರಿಜನ, ಶರನಗೌಡ ಅಂಬಳನೂರ್, ಕಾಶೀನಾಥ್ ಮಂಗಳೂರು ಹಾಗೂ ಸಿದ್ದನಗೌಡ ಕೊಣ್ಣೂರ ಇದ್ದರು.