ವಿಜಯಪುರ ನಗರದಲ್ಲಿರುವ ಮೆಟ್ರಿಕ್ ನಂತರದ ಎಸ್‌ಸಿ/ಎಸ್‌ಟಿ ಬಾಲಕರ ವಸತಿ ನಿಲಯದ ಅವ್ಯವಸ್ಥೆಯನ್ನು ಸರಿಪಡಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ತಾಲೂಕು ಅಧಿಕಾರಿಗಳಿಗೆ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಮುಖಂಡ ಸದಾಶಿವ ಬಬಲೇಶ್ವರ, “ಅಲ್ ಅಮೀನ್‌ನಲ್ಲಿರುವ ವಸತಿ ನಿಲಯ ಕೇವಲ 100 ಮಂದಿ ವಿದ್ಯಾರ್ಥಿಗಳು ತಂಗುವಷ್ಟು ಸಾಮರ್ಥ್ಯವಿದೆ. ಆದರೆ, 200 ಮಂದಿಗೂ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿಸಲಾಗಿದೆ. ಅದರಿಂದ ವಸತ ನಿಲಯದ ವಿದ್ಯಾರ್ಥಿಗಳಿಗೆ ಜಾಗ ಇಲ್ಲದೆ ಕಾರಿಡಾರ್‌ನಲ್ಲಿ ಮಲಗುವ ಪರಿಸ್ಥಿತಿ ನಿರಮ್ಆಣವಾಗಿದೆ” ಎಂದು ಆರೋಪಿಸಿದ್ದಾರೆ.
“ಸಾಮರ್ಥ್ಯಕ್ಕೂ ಮೀರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಸಿಗದಂತಾಗಿವೆ. ಗ್ರಂಥಾಲಯವಿದ್ದರೂ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳಿಲ್ಲ. ಗುಣಮಟ್ಟದ ಊಟ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪರಿಣಾಮ, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಹಾಸ್ಟೆಲ್‌ನಲ್ಲಿ 75% ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಆದರೆ, ಇತರ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರವೇಶ ನೀಡಲಾಗಿದೆ” ಎಂದು ದೂರಿದ್ದಾರೆ.
“ಹಾಸ್ಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಂವಿಧಾನಿಕ ನ್ಯಾಯ ಸಿಗದೆ ಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಗಮನವಹಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ವೇಳೆ ಬಸವರಾಜ ಮಾದರ್, ಪ್ರಲ್ಹಾದ, ಸುರೇಶ್, ಜಗ್ಗು ಮುಂತಾದವರು ಇದ್ದರು.