ಡಯಾಲಿಸಿಸ್ ಚಿಕಿತ್ಸೆ ನೀಡುವಾಗ ವೈದ್ಯರು ಮಾಡಿದ ಯಡವಟ್ಟಿನಿಂದ ರೋಗಿಯೋಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ರೋಗಿಯ ಮೃತದೇಹವನ್ನು ಇಟ್ಟುಕೊಂಡು ಮೃತನ ಕುಟುಂಬಸ್ಥರು ವೈದ್ಯರು ಮತ್ತು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ತಾಲೂಕಿನ ಮಾವಿನಹಳ್ಳಿಯ ನಿವಾಸಿ ಬಿಸ್ಮಿಲ್ಲಾ ನದಾಫ್(35) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಬಿಸ್ಮಿಲ್ಲಾ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆಗಾಗ್ಗೆ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ವೈದ್ಯರು ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿಯೇ ಅವರು ಸಾವನ್ನಪ್ಪಿದ್ದಾರೆ ಎಂದು ಬಿಸ್ಮಿಲ್ಲಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಂಗಳವಾರ ಬಿಸ್ಮಿಲ್ಲಾ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಆ ವೇಳೆ ಆಸ್ಪತ್ರೆ ಸಿಬ್ಬಂದಿ ಬಸವರಾಜ ಹಂಜಗಿ ಎಂಬಾತ ಮದ್ಯ ಸೇವಿಸಿ ಡಯಾಲಿಸಿಸ್ ಚಿಕಿತ್ಸೆ ನೀಡಿದ್ದಾನೆ. ವೈದ್ಯರು ಕೂಡ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಹೀಗಾಗಿ ಬಿಸ್ಮಿಲ್ಲಾ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಕುಟುಂಬಸ್ಥರು ದೂರಿದ್ದಾರೆ.
ಆಸ್ಪತ್ರೆಯ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.