ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಬಗೆಯ ಕೌಶಲ್ಯಗಳನ್ನು ಸಂಪೂರ್ಣವಾಗಿ ರೂಢಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಟೆಲಿವಿಷನ್ ಸ್ಟುಡಿಯೋ ಭೇಟಿ ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂಪಣೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಕ್ಷಣ ಕೆಲಸ ಸಿಗುವ ಕ್ಷೇತ್ರ ಈಗ ಮಾಧ್ಯಮ ಕ್ಷೇತ್ರವಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ನಿಮ್ಮ ಮುಂದೆ ಇವೆ. ಈ ಮಾಧ್ಯಮ ಕೌಶಲ್ಯಗಳನ್ನು ಕರಗತ ಮಾಡಿಕೊಂಡರೆ ಮಾತ್ರ ಸುಲಭವಾಗಿ ನೀವು ವೃತ್ತಿ ಬದುಕನ್ನು ರೂಪಿಸಿಕೊಳ್ಳಬಹುದು. ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯದಿಂದ ಮಾತ್ರ ಉತ್ತಮ ಟಿವಿ ಆಂಕರ್ ಆಗಲು ಸಾಧ್ಯ ಎಂದರು.
ಟಿವಿ ಆಂಕರ್ ಆಗಲು ಕೇವಲ ಉತ್ಸಾಹವಷ್ಟೇ ಸಾಲದು, ಸರಿಯಾದ ತರಬೇತಿ, ಶುದ್ಧ ಭಾಷೆ, ಆತ್ಮವಿಶ್ವಾಸ, ಮತ್ತು ಅಚ್ಚುಕಟ್ಟಾದ ಕೌಶಲ್ಯಗಳ ಅಗತ್ಯವಿದೆ. ಈ ತರಹದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳು ನಿಜವಾಗಿಯೂ ಮಹತ್ವದ ಸಾಧನೆಗೆ ನೆರವಾಗುತ್ತವೆ ಎಂದರು.
ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಚೆಲಿವಿಷನ್ ಮಾಧ್ಯಮದಲ್ಲಿ ಸುದ್ದಿ ಓದುವ ಕಲೆಯನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ಪದವಿ ಕಾಲೇಜಿನ ಬಿ.ಎ, ಬಿ.ಕಾಂ, ಬಿಎಸ್ಸಿ, ಬಿಸಿಎ, ಬಿಬಿಎಂ ಮುಂತಾದ ಕೋರ್ಸ್‌ಸಿನ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದಿರಾ?
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಸಂದೀಪ್ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾತಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸುಷ್ಮಾ ಪವಾರ ನಿರೂಪಿಸಿದರು. ಫಿಲೋಮಿನಾ ವಂದಿಸಿದರು.
