ಸರ್ಕಾರದಿಂದ ಪೋಡಿ ಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನರೇ ಬಂದು ಅರ್ಜಿ ಸಲ್ಲಿಸುವ ತನಕ ಕಾಯಬೇಡಿ, ಅಧಿಕಾರಿಗಳೇ ಗ್ರಾಮಗಳಿಗೆ ಭೇಟಿ ನೀಡಿ ಪೋಡಿ ಕಾರ್ಯ ಕೈಗೊಳ್ಳಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪೋಡಿಗೆ ಬಾಕಿ ಇರುವ ಜಮೀನುಗಳ ಪರಿಶೀಲನೆ ನಡೆಸಬೇಕು. ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಬೇಕು. ಒಂದೇ ಆರ್‌ಟಿಸಿಯಲ್ಲಿ ಹಲವರ ಹೆಸಋು ನಮೂದಾಗಿರುವುದರ ಕುರಿತು ಸರ್ವೆ ನಡೆಸಿ, ನಕ್ಷತ್ರ ತಯಾರಿಸಿ ಪ್ರತ್ಯೇಕವಾಗಿ ಆಯಾ ಜಮೀನಿನ ಮಾಲಿಕರ ಹೆಸರಿಗೆ ಆರ್‌ಟಿಸಿ ಒದಗಿಸಲು ಕ್ರಮ ವಹಿಸಬೇಕು” ಎಂದರು.
“ಭೂ ಸುರಕ್ಷಾ ಯೋಜನೆಯಡಿ ಕಂದಾಯ ಇಲಾಖೆಯಲ್ಲಿನ ಮೂಲ ಹಳೆಯ ದಾಖಲೆಗಳ ಗಣಕೀಕರಣ ನಡೆಯುತ್ತಿದೆ. ರಾಜ್ಯಾದ್ಯಂತ ಅಂದಾಜು 20 ಕೋಟಿ ಪುಟಗಳ ದಾಖಲೆಗಳ ಗಣಕೀಕರಣ ಕಾರ್ಯ ಆಗಿದೆ. ಬಾಕಿ ಇರುವ ದಾಖಲೆಗಳ ಗಣಕೀಕರಣವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಳೆಯ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ತ್ವರಿತ ಗತಿ ನೀಡಬೇಕು” ಎಂದು ಸೂಚಿಸಿದರು.
ಇದನ್ನೂ ಓದಿ: ವಿಜಯಪುರ | ಪ್ರತಿಷ್ಠಿತ ವಲಯಗಳ ಹಿಂದೆ ಕಾರ್ಮಿಕರ ಶ್ರಮ, ತ್ಯಾಗವಿದೆ: ಮಲ್ಲಿಕಾರ್ಜುನ ಎಚ್ ಟಿ
ಸಭೆಯಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ನಾಗಠಾಣ ಶಾಸಕ ವಿಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೋರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ತಹಶೀಲ್ದಾರರು ಉಪಸ್ಥಿತರಿದ್ದರು.