ಸಜ್ಜನ ಹಾಗೂ ಅನುಭವಿಯಾದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಇಂಡಿ ತಾಲೂಕಿನ ಅಗರಖೇಡ ಹಾಗೂ ಹಿರೇಬೇನೂರಲ್ಲಿ ಗುರುವಾರ ನಡೆದ ಜಿ.ಪಂ ವ್ಯಾಪ್ತಿಯ ಲೋಕಸಭೆ ಚುನಾವಣೆ ಸಭೆಯಲ್ಲಿ ಮಾತನಾಡಿ, “ಭೀಮೆಯ ದಡದ ಗ್ರಾಮಗಳಿಗೆ ಹಲವು ಅನುಕೂಲ ಮಾಡಿಕೊಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನೀರಾವರಿ, ಪ್ರವಾಸೋದ್ಯಮ, ಲಿಂಬೆ ಬೆಳೆಗಳಿಗೆ ಪ್ರಾತಿನಿಧ್ಯ ಸೇರಿದಂತೆ ನೂರಾರು ಕೆಲಸಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕೆಲಸ ಮಾಡುವವರಿಗೆ ಮತ ನೀಡಿದರೆ ಅವರಿಗೆ ಉತ್ತೇಜನ ಸಿಗುತ್ತದೆ. ಆಧ್ಯಾತ್ಮಿಕ ಸ್ವರೂಪದ ನೆಲ ಇದಾಗಿದೆ. ಈ ಕ್ಷೇತ್ರವನ್ನು ಹಿಂದೆಂದೂ ಕಾಣದಂತಹ ಅಭಿವೃದ್ಧಿ ಮಾಡಿದ್ದೇವೆ. ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೇವೆ. ಇಂಡಿ ನಗರಕ್ಕೆ ನಿರಂತರ ನೀರು, ರಸ್ತೆ, ಭೀಮಾಶಂಕರ ಸಕ್ಕರೆ ಕಾರಖಾನೆ ನಮ್ಮ ಸಾಧನೆಗಳು” ಎಂದು ಹೇಳಿದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, “ಮೋದಿಯವರು ಉದ್ಯಮಪತಿಗಳ ಬಗ್ಗೆ ತೋರಿದ ಕಾಳಜಿ ರೈತರಿಗೆ ತೋರಿಸಿದ್ದರೆ ಈ ದೇಶ ಉದ್ಧಾರವಾಗುತ್ತಿತ್ತು” ಎಂದು ಹೇಳಿದರು.
ಉದ್ಯಮಿಗಳ ಹದಿನಾಲ್ಕು ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಮೋದಿಯವರ ಕಣ್ಣಿಗೆ ರೈತರ ಕೇವಲ ಒಂದೂವರೆ ಲಕ್ಷ ಕೋಟಿ ಸಾಲ ಕಾಣಲಿಲ್ಲ. ಇಲ್ಲಿನ ಸಂಸದ ಏನೊಂದು ಕೆಲಸ ಮಾಡಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ನನಗೆ ಮತ ನೀಡಿದರೆ ನಿಮ್ಮ ಸೇವಕನಾಗಿ ದುಡಿಯುವೆ” ಎಂದು ಕೋರಿದರು.
ಇಲಿಯಾಸ್ ಬೋರಾಮಣಿ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾಕಾರವಾಗಿದ್ದನ್ನು ವಿವರಿಸಿ, ತಾಲೂಕಿಗೆ ಪ್ರತಿ ತಿಂಗಳು ಹದಿಮೂರು ಕೋಟಿಯಷ್ಟು ಹಣ ಈ ಯೋಜನೆಯಿಂದ ಬರುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | 2,326 ಮತಗಟ್ಟೆಗಳು, 14,880 ಸಿಬ್ಬಂದಿಗಳೊಂದಿಗೆ ಮತದಾನಕ್ಕೆ ಸಕಲ ಸಿದ್ಧತೆ
ಮುಖಂಡರಾದ ಅಣ್ಣಾರಾಯ ಬಿದರಕೋಟಿ, ಜಟ್ಟೆಪ್ಪ ರವಳಿ, ಎಂ.ಆರ್.ಪಾಟೀಲ, ಕಲ್ಯಾಣಗೌಡ ಪಾಟೀಲ, ಭೀಮಣ್ಣ ಕವಲಗಿ, ಶೈಲಶ್ರೀ ಜಾದ್ವ, ಸಿದ್ಧರಾಯ ಐರೋಡಗಿ, ಕಲ್ಲನಗೌಡ, ಬ್ಲಾಕ್ ಅಧ್ಯಕ್ಷರಾದ ಜಾವೇದ್ ಮೋಮಿನ್, ಕಲ್ಲನಗೌಡ ಬಿರಾದಾರ, ಶ್ರೀಶೈಲ, ಪೈಗಂಬರ್ ದೇಸಾಯಿ, ಭೋಜಪ್ಪಗೌಡ ಸಾಹುಕಾರ, ದಸ್ತಗೀರ್, ಗಿರೀಶಗೌಡ ಪಾಟೀಲ, ಭೀಮಣ್ಣ ಕವಲಗಿ ಸೇರಿದಂತೆ ಇತರರು ಇದ್ದರು.
