ಐತಿಹಾಸಿಕ ವಿಜಯಪುರ ನಗರದ ಹೆಸರನ್ನ ಬಸವೇಶ್ವರನಗರ ಎಂದು ಬದಲಾಯಿಸುವುದು ಸೂಕ್ತವಲ್ಲ ಎಂದು ಇಂಡಿ ತಾಲೂಕಿನ ವಿವಿಧ ಸಂಘಟನೆಗಳು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿವೆ.
ವಿಜಯಪುರ ನಗರವು ವಿಶ್ವ ಪ್ರಸಿದ್ಧ ಸ್ಮಾರಕಗಳನ್ನು ಹೊಂದಿದೆ. ಸಾಂಸ್ಕೃತಿಕ ವಿನಿಮಯದ ಪ್ರಮುಖ ಕೇಂದ್ರವಾಗಿದ್ದು, ಹಲವು ದಶಕಗಳಿಂದ ವಿಭಿನ್ನ ಸಂಪ್ರದಾಯ ಸಾರುತ್ತಿರುವ ತಾಣವಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬಸವಣ್ಣನವರ ಕೊಡುಗೆ ಅಪಾರ. ಆದರೂ, ವಿಜಯಪುರಕ್ಕೆ ಅವರ ಹೆಸರಿಡುವ ಕ್ರಮ ಬೇಡ ಎಂದು ಮನವಿಯಲ್ಲಿ ಕೋರಿದ್ದಾರೆ.
ವಿಜಯಪುರ ಎಂಬ ಹೆಸರು ಉಳಿಸಬೇಕು. ನಗರದ ಶ್ರೀಮಂತ ಸಾಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಮುಂದುವರೆಯಬೇಕು ಎಂದು ಸಂಘಟನೆಗಳು ಕೇಳಿಕೊಂಡಿವೆ.
ಈ ವೇಳೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಫ್ಜಲ್ ಹವಾಲ್ದಾರ್, ವೈಸ್ ಆಫ್ ಯುನಿಟಿ ಅಧ್ಯಕ್ಷ ನಾಸೀರ್ ಇನಾಂದಾರ್, ಮಜೀಬ್ ಅಫಜಲಪೂರ, ಮುನ್ನಾ ಬಾಗವಾನ್, ಮುನ್ನ ಇಂಡಿಕರ್, ಆಸಿಫ್ ಜಮಾದಾರ್, ಜಕೀರ್ ಹುಸೇನ್ ಸಂಘದ ಅಧ್ಯಕ್ಷ ಹುಸೇನ್ ಬೇಪಾರಿ, ಮುದಸ್ಸರ ಬಳಗಾನೂರು ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಅಶ್ಪಾಕ್ ಕೊಕಣಿ ಇನ್ನಿತರರು ಇದ್ದರು.