ವಿಜಯಪುರ | ಡಾಕ್ಟರ್, ಇಂಜಿನಿಯರ್‌ಗಳು ನನಗೆ ಇಂಗ್ಲಿಷ್‌ನಲ್ಲಿ ಬಯ್ಯುತ್ತಿದ್ದಾರೆ; ಪಾಲಿಕೆ ಸದಸ್ಯ ಅಳಲು

Date:

Advertisements

ನಮ್ಮ ವಾರ್ಡ್​ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ನನ್ನ ವಾರ್ಡ್​ನಲ್ಲಿ ಡಾಕ್ಟರ್, ಇಂಜಿನಿಯರ್‌ಗಳು ನನಗೆ ಇಂಗ್ಲಿಷ್‌ನಲ್ಲಿಯೇ ಬಯ್ಯುತ್ತಿದ್ದಾರೆ ಎಂದು ಪಾಲಿಕೆ ಸದಸ್ಯ ಮಳುಗೌಡ ಪಾಟೀಲ್‌ ಅಳಲು ತೋಡಿಕೊಂಡ ಪ್ರಸಂಗ ವಿಜಯಪುರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ್ ಸಮ್ಮುಖದಲ್ಲಿ ಹಾಗೂ ಮೇಯರ್ ಮೆಹಜಬೀನ್ ಹೊರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರು ತಮ್ಮ ಅಳಲು ತೋಡಿಕೊಂಡರು.

ಸದಸ್ಯ ಮಳುಗೌಡ ಪಾಟೀಲ್‌, ನನ್ನ ವಾರ್ಡ್​ನಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ. ನನ್ನ ವಾರ್ಡ್​ನಲ್ಲಿ ಡಾಕ್ಟರ್, ಇಂಜನಿಯರ್‌ಗಳೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಸಮಸ್ಯೆಯಿಂದ ಬೇಸರಗೊಂಡಿರುವ ಅವರು ನನಗೆ ಕರೆ ಮಾಡಿ ಇಂಗ್ಲಿಷ್‌ನಲ್ಲಿ ಬಯ್ಯುತ್ತಿದ್ದಾರೆ. ಯಾವ ರೀತಿ ಉತ್ತರಿಸಲಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Advertisements

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ವಿಮಲಾ ರಫೀಕ್‌ಅಹ್ಮದ್ ಖಾಣೆ, ವಾರ್ಡ್ ನಂ.24ರಲ್ಲಿ ಕುಡಿಯುವ ನೀರಿನಲ್ಲಿ ಡ್ರೈನೇಜ್ ನೀರು ಪೂರೈಕೆಯಾಗುತ್ತಿದೆ ಎಂದು ಗಂಭೀರವಾಗಿ ದೂರಿದರು. ಈ ರೀತಿ ನೀರು ಪೂರೈಕೆಯಾದರೆ ಜನರು ಯಾವ ರೀತಿ ಬದುಕಬೇಕು ಎಂದು ಪ್ರಶ್ನಿಸಿದರು.

ಆಗ ಸಚಿವ ಡಾ. ಎಂ.ಬಿ. ಪಾಟೀಲ್‌ ಸಹ ಆತಂಕ ವ್ಯಕ್ತಪಡಿಸಿ ಅಧಿಕಾರಿಗಳಿಂದ ವಿವರಣೆ ಕೇಳಿ, ಈ ಹಿಂದೆ ಡ್ರೈನೇಜ್ ಲೈನ್ ಲಿಂಕ್ ಆಗಿದ್ದ ಕಾರಣ ಈ ರೀತಿಯ ಸಮಸ್ಯೆ ಉಂಟಾಗಿದೆ, ಈ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಆಗ ವಿಮಲಾ ಕಾಣೆ, ಕೆಲವೊಂದು ವಾರ್ಡಗಳಲ್ಲಿ ಯಥೇಚ್ಚವಾಗಿ ರಾತ್ರಿ ಸಮಯದಲ್ಲಿ ನೀರು ಪೂರೈಕೆಯಾಗುತ್ತದೆ, ರಸ್ತೆಗೆ ಹರಿದು ಹೋಗುತ್ತಿದೆ, ಗಾಡಿ ತೊಳೆಯಲು ಸಹ ಈ ನೀರು ಬಳಕೆಯಾಗುತ್ತಿದೆ. ಆದರೆ, ನಮ್ಮ ವಾರ್ಡನಲ್ಲಿ ಮಾತ್ರ ಕುಡಿಯಲು ನೀರಿಲ್ಲ, ಹೀಗಾಗಿ ಒಂದು ಟೈಂಲೈನ್ ಫಿಕ್ಸ್ ಮಾಡಿ ಎಂದು ಸಚಿವರಿಗೆ ಮನವಿ ಮಾಡಿಕೊಂಡರು.

ಅಧಿಕಾರಿಗಳು ಫೋನ್ ರಿಸೀವ್ ಮಾಡುವುದೇ ಇಲ್ಲ, ಈ ರೀತಿಯಾದರೆ ಯಾವ ರೀತಿ ಜನರ ಸಮಸ್ಯೆಯನ್ನು ಹೇಳಬೇಕು ಎಂದು ಸದಸ್ಯ ರಾಹುಲ್ ಜಾಧವ ಅಸಮಾಧಾನ ಹೊರಹಾಕಿದರು. ದೌಲತಕೋಟಿ ಬಳಿ ಸರ್ಕಾರಿ ಉರ್ದು ಶಾಲೆ ಕುಸಿದು ಇಬ್ಬರು ಮಕ್ಕಳಿಗೆ ಗಾಯವಾಗಿದೆ, ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದೆ, ಸಚಿವರು ಈ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಎಂದು ಸದಸ್ಯೆ ಶಾಹೀನ್ ಬಾಂಗಿ ಸಭೆಯ ಗಮನ ಸೆಳೆದರು.

ಜಲಮಂಡಳಿ ಅಧಿಕಾರಿ ಗೈರು: ಕರೆ ಮಾಡಿ ವಾರ್ನ್ ಮಾಡಿದ ಸಚಿವರು

ಕುಡಿಯುವ ನೀರಿನ ಗಂಭೀರ ಸಮಸ್ಯೆ ಚರ್ಚೆ ನಡೆಯುತ್ತಿದ್ದಾಗ ಜಲಮಂಡಳಿಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಸಭೆಗೆ ಹಾಜರಾಗಿರಲಿಲ್ಲ. ಜಲಮಂಡಳಿ ಅಧ್ಯಕ್ಷರ ಸಭೆಗೆ ಹೋಗಿದ್ದಾರೆ ಎಂದು ಉಳಿದ ಅಧಿಕಾರಿಗಳು ಸಮಜಾಯಿಷಿ ನೀಡಲು ಬಂದಾಗ ಗರಂ ಆದ ಸಚಿವರು, ಇಲ್ಲಿ ಜನರ ಸಮಸ್ಯೆ ಇದೆ, ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆ ಇದೆ, ಈ ಹೊತ್ತಿನಲ್ಲಿ ನಿಗಮ ಮಂಡಳಿ ಅಧ್ಯಕ್ಷರಿಗೆ ಹೂಗುಚ್ಚ ನೀಡಲು ಹೋಗಿದ್ದಾರಾ? ಎಂದು ಸ್ವತಃ ಅಧಿಕಾರಿಗೆ ಕರೆ ಮಾಡಿ ಕಿಡಿಕಾರಿದರು.

ಇಲ್ಲಿ ಗಂಭೀರವಾಗಿ ಸಭೆ ನಡೆಯುತ್ತಿದೆ, ಕುಡಿಯುವ ನೀರು 11 ದಿನವಾದರೂ ಪೂರೈಕೆಯಾಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ನೀವು ಸಭೆಯ ಉದ್ದೇಶ ಹೇಳಿ ಹೋಗುವುದು ತಪ್ಪಿಸಬಹುದಿತ್ತಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಗ ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಇದ್ದರೆ ಅವರ ಕೈಗೆ ಫೋನ್ ಕೊಡಿ ಎಂದ ಸಚಿವ ಡಾ.ಎಂ.ಬಿ. ಪಾಟೀಲರು, ನಿಮ್ಮ ಅಧಿಕಾರಿಯ ವರ್ತನೆ ಬೇಜಾರು ತಂದಿದೆ, ಅವರನ್ನು ವರ್ಗಾವಣೆ ಅಲ್ಲ ಅಮಾನತ್ತು ಮಾಡಬೇಕಾಗುತ್ತದೆ, ಈ ಗಂಭೀರ ಸಮಸ್ಯೆ ಬಿಟ್ಟು ಅಲ್ಲಿಗೆ ಬರುವ ಔಚಿತ್ಯ ಇರಲಿಲ್ಲ ಅವರಿಗೆ ಇಲ್ಲಿ ಬಂದು ಕೆಲಸ ಮಾಡಲು ಹೇಳಿ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಆಯುಕ್ತರ ವಿರುದ್ಧ ಎಂಬಿಪಿ ಗರಂ

ಸಭೆಯಲ್ಲಿಯೇ ಪಾಲಿಕೆ ಆಯುಕ್ತರ ವಿರುದ್ಧವು ಗರಂ ಆದ ಸಚಿವ ಎಂ.ಬಿ. ಪಾಟೀಲ್‌, ಕುಡಿಯುವ ನೀರಿಗೆ ಸಂಬಂಧಿಸಿದಂತೆ ತುರ್ತಾಗಿ ಆಗಬೇಕಿರುವ ಎಲ್ಲ ಕಾಮಗಾರಿಗಳು ಒಂದೇ ವಾರದಲ್ಲಿ ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದರು. ಮುಂದಿನ ವಾರದಲ್ಲಿ ಪಾಲಿಕೆ ಹಾಗೂ ಸರ್ವಸದಸ್ಯರೊಂದಿಗೆ ಮತ್ತೆ ಸಭೆ ನಡೆಸುತ್ತೇನೆ ಅಷ್ಟರಲ್ಲಿ ತುರ್ತು ಕಾಮಗಾರಿಗಳು ಪೂರ್ಣಗೊಳ್ಳದಿದ್ದಲ್ಲಿ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು ವಿವಿಧ ವಾರ್ಡ್​ಗಳಲ್ಲಿರುವ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿ ಬಾಡಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಸ್ವಚ್ಛಗೊಂಡಿರುವ ಪುರಾತನ ಬಾವಿಗಳ ನೀರನ್ನು ಗೃಹಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಕಾರ್ಯಯೋಜನೆ ರೂಪಿಸಿ ತುರ್ತು ಅನುಷ್ಠಾನಗೊಳಿಸಬೇಕು ಎಂದು ಸಚಿವ ಎಂ.ಬಿ. ಪಾಟೀಲ ನಿರ್ದೇಶನ ನೀಡಿದರು.

ವಿಜಯಪುರ ನಗರದಲ್ಲಿ ಐತಿಹಾಸಿಕ ತಾಜ್ ಬಾವಡಿ ಸೇರಿದಂತೆ ಅನೇಕ ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಎಲ್ಲ ಬಾವಡಿಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಸ್ನಾನ, ಬಟ್ಟೆ ಒಗೆಯಲು ಬಳಸಬಹುದಾಗಿದೆ, ಸರಿಸುಮಾರು ಐದು ಎಂಎಲ್‌ಡಿಯಷ್ಟು ನೀರು ಸದ್ಭಳಕೆ ಮಾಡಿಕೊಳ್ಳಬಹುದಾಗಿದ್ದು, ಭೂತನಾಳ ಕೆರೆ ಜಲಮೂಲದ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸಬಹುದಾಗಿದೆ, ಈ ನಿಟ್ಟಿನಲ್ಲಿ ಪಾಲಿಕೆ ಮುಂದಾಗಬೇಕು ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X