ಮಳೆ ಕೊರತೆ ಅಥವಾ ಮೂರು ವಾರಗಳಿಗೂ ಅಧಿಕ ಕಾಲ ನಿರಂತರವಾಗಿ ಶುಷ್ಕ ವಾತಾವರಣ ಇದ್ದರೆ ಮಾತ್ರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಸಾಧ್ಯ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನಿಗದಿಗೊಳಿಸಿದೆ. ಪ್ರಸ್ತುತ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಎರಡು ವಾರಗಳ ಕಾಲ ನಿರಂತರ ಶುಷ್ಕ ವಾತಾವರಣವಿದೆ. ಇನ್ನೊಂದು ವಾರ ಇದೇ ಪರಿಸ್ಥಿತಿ ಮುಂದುವರೆದರೆ ತಿಕೋಟಾ ತಾಲೂಕು ಸಹ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆದ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. “ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆ ಮಾರ್ಗಸೂಚಿಗಳಲ್ಲಿಯೂ ಕೆಲವು ಬದಲಾವಣೆ ಮಾಡುವಂತೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ನಡೆಸಿದೆ” ಎಂದರು.
“ಬರ ಪೀಡಿತ ತಾಲೂಕು ಘೋಷಣೆಯಾಗಲು ಶೇ.60ರಷ್ಟು ಮಳೆ ಕೊರತೆ ಇರಬೇಕು ಅಥವಾ ಸತತ ಮೂರು ವಾರ ಶುಷ್ಕ ವಾತಾವರಣ ಇರಬೇಕು. ತಿಕೋಟಾದಲ್ಲಿ ಜುಲೈ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಜೂನ್, ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತಾದರೂ, ಸೆಪ್ಟೆಂಬರ್ ತಿಂಗಳಲ್ಲಿ ಶೇ.5ರಷ್ಟು ಮಳೆ ಹೆಚ್ಚಾಗಿದೆ. ಹೀಗಾಗಿ ಬರಪೀಡಿತ ತಾಲೂಕು ಘೋಷಣೆಗೆ ತೊಡಕಾಗಿದೆ. ಹೀಗಾಗಿ, ಮೂರು ವಾರಗಳ ಕಾಲ ಶುಷ್ಕ ವಾತಾವರಣವಿದ್ದರೆ ಮಾತ್ರ ಬರ ಘೋಷಣೆ ಮಾಡಲು ಸಾಧ್ಯ. ಸದ್ಯ ಎರಡು ವಾರ ಶುಷ್ಕ ವಾತಾವರಣ ಮುಂದುವರೆದಿದೆ. ಇನ್ನೊಂದು ವಾರ ಇದೇ ವಾತಾವರಣ ಮುಂದುವರೆದರೆ ತಿಕೋಟಾ ಸಹ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ” ಎಂದರು.
“ಬರ ಪರಿಸ್ಥಿತಿಯನ್ನು ಅಧಿಕಾರಿಗಳು ಅತ್ಯಂತ ಗಂಭೀರವಾಗಿ ನಿಭಾಯಿಸಬೇಕು. ಕುಡಿಯುವ ನೀರಿನ ಸಮಸ್ಯೆ, ಟ್ಯಾಂಕರ್ ಲಭ್ಯತೆ, ಬೆಳೆ ಪರಿಹಾರ ಮೊದಲಾದ ವಿಷಯಗಳ ಬಗ್ಗೆ ಪಿಡಿಓ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂಧ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಅಧಿಕಾರಿಗಳು ಒತ್ತಡದಲ್ಲಿದ್ದರೂ ಸಹ ಸಾರ್ವಜನಿಕರ ಕರೆ ಸ್ವೀಕರಿಸಬೇಕು. ಕೇವಲ ಕಚೇರಿಯಲ್ಲಿ ಕುಳಿತುಕೊಂಡರೆ ಸಲ್ಲದು. ಫೀಲ್ಡ್ ವಿಸಿಟ್ ಮಾಡಿ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು. ಫೀಲ್ಡ್ ವಿಸಿಟ್ ಹೆಸರಿನಲ್ಲಿ ಹೊರಗಡೆ ಅಡ್ಡಾಡಿದರೆ ಸರ್ಕಾರ ಸಹಿಸಲ್ಲ. ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಅಧಿಕಾರಿಗಳನ್ನೇ ಹೊಣೆಗಾರಿಕೆಯನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಆಲಮಟ್ಟಿ ಜಲಾಶಯದಲ್ಲಿ 96 ಟಿಎಂಸಿ ಲೈವ್ ಸ್ಟೋರೆಜ್ ನೀರಿನ ಲಭ್ಯತೆ ಇದೆ. ನಾರಾಯಣಪೂರ ಜಲಾಶಯದಲ್ಲಿ 11.83 ಟಿಎಂಸಿ ನೀರಿನ ಲಭ್ಯತೆ ಇದೆ. ಆದರೆ, ಒಳ ಹರಿವು ಸಂಪೂರ್ಣ ಶೂನ್ಯವಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ 12 ಟಿಎಂಸಿಯಷ್ಟು ನೀರಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ” ಎಂದರು.
ಸಭೆಯಲ್ಲಿ ಶಾಸಕ ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರೋಷನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ ಭಗವಾನ ಸೋನಾವನೆ ಮೊದಲಾದವರು ಇದ್ದರು.