ರಾಜ್ಯದಲ್ಲಿ ಭೀಕರ ಬರ ಇದ್ದರೂ ಸಹ ಕೇಂದ್ರ ಸರ್ಕಾರ ಕಿಂಚಿತ್ತೂ ಸ್ಪಂದಿಸುತ್ತಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ಮಾಡಿದ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಬರದ ವಿಷಯವಾಗಿ ಯಾವ ಜವಾಬ್ದಾರಿ ನಿಭಾಯಿಸಿಲ್ಲ. ಇದು ರೈತ ವಿರೋಧಿ ನೀತಿಯಾಗಿದೆ. ಆದರೆ, ಕೇಂದ್ರದಲ್ಲಿ 27ಸಂಸದರಿದ್ದರೂ ಈ ಪೈಕಿ ಯಾರೂ ಕೂಡಾ ಬರದ ಬಗ್ಗೆ ಮಾತನಾಡುತ್ತಿಲ್ಲ.
ರಾಜ್ಯದ ಸಂಸದರು, ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ಸಚಿವರನ್ನು ಭೇಟಿ ಮಾಡುತ್ತಿಲ್ಲ. ಅವರು ಇವರಿಗೆ ಸಮಯವನ್ನೇ ಕೊಡುತ್ತಿಲ್ಲ. ಹೀಗಾಗಿ, ಇಲ್ಲಿಯವರೆಗೆ ಕೇಂದ್ರದಿಂದ ಒಂದು ಬಿಡಿಗಾಸು ಪರಿಹಾರ ಬಂದಿಲ್ಲ, ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿದರು. ಆದರೆ, ವರದಿ ಕೊಟ್ಟಿದ್ದಾರೋ ಇಲ್ಲವೋ ಅದು ಗೊತ್ತಿಲ್ಲ ಎಂದರು.
ಬರ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ. ಅಧಿಕಾರದಲ್ಲಿ ಯಾರೇ ಇದ್ದರೂ, ತಕ್ಷಣ ರೈತರ ನೆರವಿಗೆ ಬರಬೇಕು. ಈ ವಿಷಯದಲ್ಲಿ ರಾಜ್ಯಕ್ಕಿಂತ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬಾರದು.
ಜಿಲ್ಲೆಯಲ್ಲಿರುವ 10ಸಾವಿರ ಹೆಕ್ಟೇರ್ ಲಿಂಬೆ ಬೆಳೆಯುವ ಪ್ರದೇಶದ ಪೈಕಿ ಅಂದಾಜು 7.5ಕೋಟಿ ಹೆಕ್ಟೇರ್ ಲಿಂಬೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾಡಳಿತ ವರದಿ ಕೂಡ ಒಪ್ಪಿಸಿದೆ. ಆ ಪ್ರಕಾರ ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿ ಕೂಡ ಬದಲಾಗುವ ಅವಶ್ಯಕತೆ ಇದೆ ಎಂದರು.
ರೈತರು ಸೂರ್ಯಪಾನಕ್ಕೆ ಪ್ರತಿ ಎಕರೆಗೆ ಹತ್ತು ಸಾವಿರ ಖರ್ಚು ಮಾಡಿದ್ದಾರೆ. ಆದರೆ, ಪರಿಹಾರ ಮೂರೂವರೆ ಸಾವಿರ ಪರಿಹಾರ ಸಿಗಲಿದೆ. ಲಿಂಬೆ ಬೆಳೆಗಾರರ ಸ್ಥಿತಿ ಕೂಡ ಭಿನ್ನವಾಗಿಲ್ಲ. ಮೂರು ಲಕ್ಷ ಎಕರೆ ತೊಗರಿ ನಾಶವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ. ಸರಕಾರ ಕ್ಯಾಬಿನೆಟ್‌ನಲ್ಲೂ ನಿರ್ಧಾರ ಮಾಡಿದ್ದು, ಉದ್ಯೋಗ ಖಾತ್ರಿ ಮಾನವ ದಿನಗಳ ಸೃಜನತೆಗೆ ಲಿಮಿಟ್ ನೀಡಿಲ್ಲ. ಎಷ್ಟು ಜನ ಬಂದರೂ ಕೆಲಸ ನೀಡಬೇಕೆಂದು ತಿಳಿಸಲಾಗಿದೆ ಎಂದರು.
ಇಡೀ ರಾಜ್ಯ ತೀವ್ರ ಬರದಿಂದ ತತ್ತರಿಸಿದ್ದರಿಂದ ಈಗಾಗಲೇ ರಾಜ್ಯ ಸರಕಾರ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಹೀಗಾಗಿ ಸರ್ಕಾರ ಕುಡಿಯುವ ನೀರು ಸೇರಿದಂತೆ ಪ್ರತಿಯೊಂದಕ್ಕೂ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಹಣ ಠೇವಣಿ ಮಾಡಲಾಗಿದೆ ಎಂದು ವಿವರಿಸಿದರು.
ಇನ್ನೂ ಅಗತ್ಯ ಬಿದ್ದರೆ, ನೂರು ಕೋಟಿಯವರೆಗೆ ಹಣ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸರ್ಕಾರದ ಸ್ಪಷ್ಟ ಸೂಚನೆಯಿರುವುದರಿಂದ ಬಹುತೇಕ ಇಲಾಖೆಗಳು ಬರದ ಮಾಹಿತಿ ನೀಡಿವೆ ಎಂದು ಮಾಹಿತಿ ಹಂಚಿಕೊಂಡರು.