ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಮೇ 5ರಿಂದ ಆರಂಭಗೊಂಡಿರುವ ಒಳಮೀಸಲಾತಿ ಸಮೀಕ್ಷೆಯನ್ನು, ನಿಗದಿಯಾಗಿರುವ ಮೇ 17ರ ಅವಧಿಗೆ ಮುಗಿಸಲು ಸಮೀಕ್ಷೆದಾರರು ತಿಣುಕಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಡಿಎಸ್‌ಎಸ್ ಮುಖಂಡರಾದ ಗುಂಡಪ್ಪ ಛಲವಾದಿ, ಸಿದ್ದಣ್ಣ ಕಟ್ಟಿಮನಿ ಸಮಾಜ ಕಲ್ಯಾಣ ಅಧಿಕಾರಿ ಬಸಂತಿ ಮಠ ಅವರನ್ನು ಒತ್ತಾಯಿಸಿದರು.
ನಾಲತವಾಡದಲ್ಲಿ ಆರಂಭಗೊಂಡ ಒಳಮೀಸಲಾತಿ ಸಮೀಕ್ಷೆ ಪರಿಶೀಲನೆಗೆ ಆಗಮಿಸಿದ ವೇಳೆ ಅಧಿಕಾರಿ ಬಸಂತಿ ಅವರಿಗೆ ಮನವಿ ಮಾಡಿದ ಮುಖಂಡರು, “ನೀವು ನೀಡಿದ ಕಾಲಮಿತಿಯಲ್ಲಿ ಸಮೀಕ್ಷೆ ಮುಕ್ತಾಯಗೊಳಿಸುವುದು ಬಹುತೇಕ ಅನುಮಾನವಾಗಿದೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿ ನೇಮಿಸಿ, ಇಲ್ಲ ಸಮೀಕ್ಷೆ ಅವಧಿ ವಿಸ್ತರಿಸಬೇಕು” ಎಂದರು.
“ಪ್ರತಿ ಕುಟುಂಬಕ್ಕೆ ದತ್ತಾಂಶ ಸಂಗ್ರಹಕ್ಕೆ ಕನಿಷ್ಠ ಅರ್ಧ ಗಂಟೆ ತೆಗೆದುಕೊಳ್ಳುತ್ತಿದೆ. ಪಟ್ಟಣದಲ್ಲಿ ಸಾವಿರಾರು ಕುಟುಂಬಗಳಿವೆ. ಹೀಗಾದ್ರೆ ಅವಧಿಯೊಳಗೆ ಸಮೀಕ್ಷೆ ಅಸಾಧ್ಯವಾಗುತ್ತದೆ. 101 ಉಪ ಜಾತಿಗಳು ಪರಿಶೀಲನೆ ಜತಗೆ ಕುಟುಂಬಸ್ಥರ ದತ್ತಾಂಶ ಸೇರ್ಪಡೆ ಸೂಕ್ತ ದಾಖಲೆ ಪಡೆಯಲು ಹಾಗೂ ಅವರ ಜಾತಿ ನಮೂದಿಸಲು ಸಿಬ್ಬಂದಿಗೆ ಸಮಯ ಬೇಕು. ಜತಗೆ ಸರ್ವರ್ ಸಮಸ್ಯೆಯೂ ಇದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮರ ಕಡಿತ ಕಾರ್ಯಕ್ಕೆ ವಿರೋಧ; ನೆಲದಡಿ ವಿದ್ಯುತ್ ತಂತಿ ಅಳವಡಿಕೆಗೆ ಆಗ್ರಹ
ಹೋರಾಟಗಾರರು ನಾಲತವಾಡ ಭಾಗದಲ್ಲಿ “ಬೇಡ ಜಂಗಮ ಜಾತಿಗೆ ಸೇರಿದ ಯಾವುದೇ ಕುಟುಂಬಗಳಿಲ್ಲ. ಒಂದು ವೇಳೆ ತಾವು ಅವರ ಮಾತು ಕೇಳಿ ಕಾಲಂಗಳಲ್ಲಿ ಬೇಡ ಜಾತಿ ಜಂಗಮ ಎಂದು ಸೇರ್ಪಡೆ ಮಾಡಿದರೆ ನಿಮ್ಮ ಹಾಗೂ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಡಿಎಸ್‌ಎಸ್ ಮುಖಂಡರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
“ಪಟ್ಟಣದಲ್ಲಿ ಹೆಚ್ಚಿನ ಸಂಬಂಧಿ ನೇಮಿಸಲು ಸ್ಥಳದಲ್ಲಿ ಆದೇಶ ಮಾಡಿದ್ದೇನೆ. ದತ್ತಾಂಶಗಳ ಸಂಗ್ರಹಕ್ಕೆ ತಾವು ಸಹಕರಿಸಬೇಕು. ಅವಧಿ ವಿಸ್ತರಣೆ ಕುರಿತು ಮೇಲಧಿಕಾರಿಗಳ ಮಟ್ಟದಲ್ಲಿದೆ. ಸಾಧ್ಯವಾದಷ್ಟು ಅವಧಿಯೊಳಗೇ ಮುಗಿಸುವ ಲಕ್ಷಣಗಳಿವೆ” ಎಂದು ಮಾಹಿತಿ ನೀಡಿದರು.