ನಾಡಿನ ಏಕೈಕ ಮಹಿಳಾ ವಿಶ್ವವಿದ್ಯಾಲಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ವಸತಿ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿಶ್ವವಿದ್ಯಾಲಯದ ಆಡಳಿತ ಭವನದ ಎದುರು ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ ಮಾತನಾಡಿ, “ನಾಡಿನ ಏಕೈಕ ಮಹಿಳಾ ವಿಶ್ವವಿದ್ಯಾಲಯ ನಮ್ಮ ವಿಜಯಪುರ ಜಿಲ್ಲೆಯಲ್ಲಿದೆಯೆಂದು ಹೆಮ್ಮೆಯಿಂದ ಹೇಳಲು ಮಾತ್ರ ಸೀಮಿತವಾಗಿದೆಯೇ ಹೊರತು, ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿನಿಯರಿಗೆ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ” ಎಂದರು.
“ವಿಶ್ವವಿದ್ಯಾಲಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಕನಿಷ್ಟ ಪಕ್ಷ ಸರಿಯಾದ ವಸತಿ ಸೌಕರ್ಯ ನೀಡುವಲ್ಲಿ ವಿಶ್ವವಿದ್ಯಾಲಯದ ಆಡಳಿತ ವರ್ಗ ವಿಫಲವಾಗಿದೆ. ಆರು ತಿಂಗಳ ಹಿಂದೆಯೇ ವಸತಿ ನಿಲಯಗಳ ವ್ಯವಸ್ಥೆಯನ್ನು ಸರಿಪಡಿಸುವಂತೆ ಗಮನಕ್ಕೆ ತಂದಿದ್ದರೂ ಕೂಡಾ ಕುಲಪತಿಗಳು ಎಚ್ಚೆತ್ತಕೊಳ್ಳದಿರುವುದು ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕುಲಪತಿಗಳು ಈಗಲಾದರೂ ಎಚ್ಚೆತ್ತುಕೊಂಡು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ” ಎಂದು ಅಕ್ಷಯ್ ಕುಮಾರ್ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು: ಸಿ ಯು ಬೆಳಕ್ಕಿ ಸಲಹೆ
ಈ ವೇಳೆ ಮನವಿ ಸ್ವೀಕರಿಸಿದ ವಿಶ್ವವಿದ್ಯಾಲಯದ ಕುಲಪತಿಗಳು, “ವಿಧ್ಯಾರ್ಥಿನಿಯರ ಬೇಡಿಕೆಯನ್ನು ಶೀಘ್ರವೇ ಈಡೇರಿಸುತ್ತೇವೆ” ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪರಿಷತ್ ಮುಖಂಡರಾದ ಯುವರಾಜ, ಮಹಾಂತೇಶ್, ಯಮನೂರಿ, ಪ್ರಜ್ವಲ, ಸಂದೇಶ್ ಮತ್ತು ಹಲವು ವಿದ್ಯಾರ್ಥಿನಿಯರು ಇದ್ದರು.
