ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಗುರುವಾರ (ಜ.25) ರಾತ್ರಿ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಮತ್ತು ಹತ್ತರಕಿಹಾಳ, ನಂದಿಹಾಳ, ವಿಜಯಪುರ ವ್ಯಾಪ್ತಿಯಲ್ಲಿ 2.6 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಮಿಯ 2ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ನಡುಗುವ ಅನುಭವ ಆಗುತ್ತಲೇ ಮನೆಗಳ ಗೋಡೆಗಳಿಗೆ ಹಾಕಿದ್ದ ಪಾತ್ರೆಗಳು ಸೇರಿದಂತೆ ಇತರೆ ವಸ್ತುಗಳು ಚದುರಿ ಸದ್ದು ಮಾಡಿವೆ. ಇದರಿಂದಾಗಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ಭಾಗದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಿರುವುದು ಜಿಲ್ಲೆಯ ಜನತೆಗೆ ಭಯಹುಟ್ಟಿಸಿದೆ. ಗುರುವಾರ ಸಂಭವಿಸಿದ ಲಘು ಭೂಕಂಪನವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢೀಕರಿಸಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯ ಉಕುಮನಾಳ ಗ್ರಾಮದಲ್ಲಿ 2023ರ ಡಿಸೆಂಬರ್ 8ರ ಶುಕ್ರವಾರ ಬೆಳಗ್ಗೆ 6.52ಕ್ಕೆ ಭೂಂಕನಪದ ಅನುಭವವಾಗಿತ್ತು. ಅಂದುಕೂಡ ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದು ಕೆಲವು ಸಮಸಯದವರೆಗೆ ಇಲ್ಲೇ ಕಾಲಕಳೆಯುವಂತಾಗಿತ್ತು.
ಡಿಸೆಂಬರ್ 8ರ ಬೆಳಗಿನ ಜಾವ ರಿಕ್ಟರ್ ಮಾಪಕದಲ್ಲಿ 3.1ರಷ್ಟು ತೀವ್ರತೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ದೃಢಪಡಿಸಿದ್ದರು.
ಕಳೆದ 2ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸುತ್ತಲೇ ಇದ್ದು, ಜನರು ಆತಂಕದಲ್ಲಿ ಜೀವನ ಕಳೆಯುಂತಾಗಿದೆ. ರಾತ್ರಿ, ಮಧ್ಯರಾತ್ರಿ ಸಮಯದಲ್ಲಿ ಏಕಾಏಕಿ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದು ಜನರು ನಿದ್ದೆಗೆಡುವಂತೆ ಮಾಡಿದೆ.