ಮೂಢನಂಬಿಕೆ, ಹಸಿವು, ಬಡತನದಂತಹ ಸಾಮಾಜಿಕ ಸಮಸ್ಯೆಗೆ ಶಿಕ್ಷಣವೊಂದೇ ಪರಿಹಾರ. ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು ಎಂದು ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಾಚಾದೊ ಹೇಳಿದರು.
ನಗರದ ಸಂತಮ್ಮನವರ ದೇವಾಲಯದ ಸಭಾಂಗಣದಲ್ಲಿ ಜಸ್ವಿಟ್ ಎಜುಕೇಶನಲ್ ಮತ್ತು ಚಾರಿಟೆಬಲ್ ಸೊಸೈಟಿ ಹಾಗೂ ಅದರ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಜಿಲ್ಲೆಯ ಜಸ್ವಿಟ್ ಎಜುಕೇಶನಲ್ ಮತ್ತು ಚಾರಿಟೆಬಲ್ ಸೊಸೈಟಿ ಹಾಗೂ ಅದರ ಅಂಗ ಸಂಸ್ಥೆಗಳು ಜಿಲ್ಲೆಯಾದ್ಯಂತ ಬಡವರ ಮಕ್ಕಳ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುತ್ತಾ ಬಂದಿವೆ. ಪ್ರತಿ ಮಗುವಿನ ಶಿಕ್ಷಣ, ಸಾಮಾಜಿಕ ಜೀವನ ಸೇರಿ ವೈಯಕ್ತಿಕ ಬೆಳವಣಿಗೆಗೂ ಪೂರಕವಾಗುವಂತಹ ಪರಿಸರವನ್ನು ಈ ಟ್ರಸ್ಟ್‌ಗಳು ನಿರ್ಮಾಣ ಮಾಡುತ್ತಿವೆ. ಶಿಕ್ಷಣ ಉದ್ಯಮವಾಗಿರುವ ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು” ಎಂದರು.

ಸೊಸೈಟಿಯ ಫಾದರ್ ಫ್ರಾನ್ಸಿಸ್ ಮೆನೇಜಸ್ ಮಾತನಾಡಿ, “ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆಯಲಿದ್ದು ಎಲ್ಲರೂ ಶಿಕ್ಷಣ ಪಡೆದು ಮಾದರಿ ಜೀವನ ರೂಪಿಸಿಕೊಳ್ಳಿ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಬದುಕಿನ ಮೌಲ್ಯ ಪರಸ್ಪರ ಸಹಾಯ ಸಹಕಾರ ಮನೋಭಾವ ಹಾಗೂ ಸಾಮಾಜಿಕ ಕಳಕಳಿ ಬೆಳಸಿಕೊಳ್ಳುವುದು ಕೂಡ ತುಂಬಾ ಅಗತ್ಯವಾದದ್ದು. ಪ್ರಸ್ತುತವಾಗಿ ಮಾನವೀಯ ಮೌಲ್ಯಗಳು ಮರೆಯಾಗುತ್ತವೆ. ಇದು ಸಮಾಜಕ್ಕೆ ಮಾರಕವಾದದ್ದು. ಆದ್ದರಿಂದ ಮಾನವೀಯ ಮೌಲ್ಯಗಳು ಅಳವಡಿಸಿಕೊಂಡು ಪರೋಪಕಾರಿ ಜೀವನ ಸಾಗಿಸಲು ಎಲ್ಲಾ ವಿದ್ಯಾರ್ಥಿಗಳು ಮುಂದಾಗಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೈಪಿಡಿ ಬಿಡುಗಡೆ
ಕಾರ್ಯಕ್ರಮದಲ್ಲಿ ಲಾಯಲ ಪದವಿ ಪೂರ್ವ ಕಾಲೇಜು ನಿರ್ದೇಶಕ ಫಾದರ್ ರೊನಾಲ್ಡೊ ಸೇರಾವೋ, ಲಾಯಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪ್ರಾಂಶುಪಾಲ ಫಾದರ್ ಸಂತೋಷ್ ಫರ್ನಾಂಡಿಸ್, ಸಂತ ಅಣ್ಣಮ್ಮನವರ ದೇವಾಲಯದ ವಾಜ್ ಧರ್ಮಗುರು ಫಾದರ್ ಜೋಸೆಫ್, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಹ ನಿರ್ದೇಶಕ ಫಾದರ್ ಸುಮನ್ ಬಾಲು ಸೇರಿದಂತೆ ಇತರರು ಉಪಸ್ಥಿತರಿದ್ದರು.
