ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಮಾರ್ಗ. ಅದರ ಮೂಲಕ ಸಮಾಜ ನಿರ್ಮಾಣದ ಕಾರ್ಯ ನಡೆಯಬೇಕಾಗಿದೆ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು.
ವಿಜಯಪುರ ಜಿಲ್ಲೆಯ ಯಲಗೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗ ಆಯೋಜಿಸಿದ್ದ ‘ನಾಗರಿಕ ಪೌರತ್ವ ತರಬೇತಿ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. “ಸಮುದಾಯವು ಪ್ರತಿನಿತ್ಯ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ, ಶಿಕ್ಷಣದ ಅಗತ್ಯ ಅತೀ ಮುಖ್ಯ ಶಿಕ್ಷಣದ ಮೂಲಕ ಮಾತ್ರ ಉತ್ತಮ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ” ಎಂದರು.
“ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ಕೃಷ್ಟವಾದರೆ, ಗುಣಮಟ್ಟದ ಶಿಕ್ಷಣ ನೀಡಿದರೆ. ನಮ್ಮ ಗ್ರಾಮಗಳು ಸುಧಾರಣೆಯಾಗಲು ಸಾಧ್ಯ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್. ಸೋಮನಾಳ ಮಾತನಾಡಿ, “ನಾಗರಿಕತ್ವವು ಪ್ರಜ್ಞಾಪೂರ್ವಕವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ನಮ್ಮ ಸಮುದಾಯದಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರು ವೈಜ್ಞಾನಿಕ ಮನೋಬಾವ ಬೆಳೆಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಅಶೋಕಕುಮಾರ ಸುರಾಪುರ, ಡಾ.ಪ್ರಕಾಶ.ಸಣ್ಣಕ್ಕನವರ, ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ಯಲಗೂರ ಗ್ರಾಮದ ಗಣ್ಯರಾದ ಶಾಮ್ ಪಾತ್ರದ, ಗೋವಿಂದಪ್ಪಾ ಪೂಜಾರ, ಭೀಮಣ್ಣ ಅವಟಗೇರ, ಶ್ರೀಶೈಲ ಹೂಗಾರ, ಗುಂಡಪ್ಪ ತಳವಾರ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ವಿಷ್ಣು. ತಿಂದೆ ಶಿಬಿರದ ಗುರಿ-ಉದ್ದೇಶಗಳನ್ನು ತಿಳಿಸಿಕೊಟ್ಟರು. ಶಿಬಿರದ ಸಂಯೋಜಕ ಪ್ರೊ. ಯು. ಕೆ ಕುಲಕರ್ಣಿ ಸ್ವಾಗತಿಸಿದರು.