ದೇಶ ಸುಧಾರಣೆಯಾಗಬೇಕೆಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ವಿಶೇಷವಾಗಿ ಶೈಕ್ಷಣಿಕವಾಗಿ ಸೌಲಭ್ಯಗಳ ಸುಧಾರಣೆ ಅತಿ ಮುಖ್ಯವಾಗಿದೆ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್ ಆರ್ ಪಾಟೀಲ ಬ್ಯಾಡಗಿ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಒಡಲದನಿ ಮಹಿಳಾ ಒಕ್ಕೂಟದ ಸದಸ್ಯರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ 56 ಸಾವಿರ ಕೋಟಿ ಹಣವನ್ನು ಪಂಚ ಗ್ಯಾರೆಂಟಿಗಳಿಗಾಗಿಯೇ ಮೀಸಲಿಟ್ಟಿದೆ. ರಾಜೀವ್ ಗಾಂಧಿಯವರ ಹೆಸರಲ್ಲಿ ವಸತಿ ಯೋಜನೆಗಳು, ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಬಡವರಿಗೆ, ದೀನ ದಲಿತರಿಗೆ ಅನುಕೂಲವಾಗಲೆಂದೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ” ಎಂದರು.
ಒಡಲದನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ ಭುವನೇಶ್ವರಿ ಕಾಂಬಳೆ ಮಾತನಾಡಿ, “ಮಹಿಳೆಯರಿಗೆ ಏನಾದರೂ ಕೊಟ್ಟರೆ ಅವರು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಬಬಲಾದಿಗ ಗ್ರಾಮದ ತಾಯಂದಿರು ಸಾವಯವ ಕೃಷಿ ಮಾಡಿ, ಪರಿಶುದ್ಧವಾದ ಆಹಾರವನ್ನು ಕೊಡುತ್ತಿರುವುದು ಅತ್ಯಂತ ಶ್ರೇಷ್ಠವಾದದ್ದು” ಎಂದು ಹರ್ಷ ವ್ಯಕ್ತಪಡಿಸಿದರು.
ಗ್ಯಾರೆಂಟಿ ಯೋಜನೆಯ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ ಮಾತನಾಡಿ, “ಶಕ್ತಿ ಯೋಜನೆ ಸಾಮಾನ್ಯ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ. ವ್ಯವಹಾರಿಕ ಜ್ಞಾನ ಹೆಚ್ಚಿಸಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಬಡ ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವ ವಿವಿ: ಡಿವಿಪಿ ಪ್ರತಿಭಟನೆ
ಈ ವೇಳೆ ಸಾರಿಗೆ ನಿಯಂತ್ರಣಾಧಿಕಾರಿ ನಾರಾಯಣ ಕುರುಬರ, ಇಂಡಿ ಘಟಕ ವ್ಯವಸ್ಥಾಪಕ ರೇವಣಸಿದ್ಧ ಕೈನೂರ, ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಶಾಂತ ಕಾಳೆ, ತಾಪಂ ಇಒ ಡಾ. ಕನ್ನೊರ, ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದುರಾಯಗೌಡ ಬಿರಾದಾರ, ಒಡಲದನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳಾದ ಲಕ್ಷ್ಮಿ ದ್ರಾವಿಡ, ಸಂಗೀತ ಮಯೂರ ಹಾಗೂ ಇತರರು ಉಪಸ್ಥಿತರಿದ್ದರು.